ಕಾರವಾರ: ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಅಪಘಾತಗಳನ್ನು ತಡೆಗಟ್ಟಲು ಸರಕು ಸಾಗಣೆ ವಾಹನಗಳಲ್ಲಿ ಮಿತಿ ಮೀರಿದ ಲೋಡ್ ಸಾಗಾಟ ಕಂಡುಬಂದರೆ ತಕ್ಷಣವೇ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಅಧಿಕಾರಿಗಳಿಗೆ ಕಡಕ್ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಕೇವಲ ಒಂದೇ ಪ್ರದೇಶಕ್ಕೆ ಸೀಮಿತವಾಗದೆ ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಖಾಸಗಿ ಬಸ್ಗಳ ಪರಿಶೀಲನೆ: ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ವೈಯಕ್ತಿಕ ಲಗೇಜ್ ಹೊರತುಪಡಿಸಿ ಇತರೆ ವಾಣಿಜ್ಯ ವಸ್ತುಗಳನ್ನು ನಿಯಮಬಾಹಿರವಾಗಿ ಸಾಗಿಸುವುದರ ಮೇಲೆ ವಿಶೇಷ ನಿಗಾ ಇಡಬೇಕು.
ಇಬ್ಬರು ಚಾಲಕರು ಕಡ್ಡಾಯ: ದೂರ ಪ್ರಯಾಣದ ಬಸ್ಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇಬ್ಬರು ಚಾಲಕರು ಕಡ್ಡಾಯವಾಗಿ ಇರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
ಕಾರವಾರದ ಫ್ಲೈಓವರ್ ಕೆಳಭಾಗದಲ್ಲಿ ಅಂಗಡಿಗಳು ಹಾಗೂ ಜನವಸತಿ ಇರುವುದರಿಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಗತ್ಯ ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಯಿತು.
ಕುಮಟಾ ಭಾಗದಲ್ಲಿ ಅಪಘಾತ ನಿಯಂತ್ರಣ: ಇತ್ತೀಚೆಗೆ ಕುಮಟಾ ವ್ಯಾಪ್ತಿಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸ್ಥಳಗಳಲ್ಲಿ ತಕ್ಷಣವೇ ಬೀದಿ ದೀಪ, ರಸ್ತೆ ಲೈನ್ ಮಾರ್ಕಿಂಗ್ ಹಾಗೂ ಕ್ಯಾಟ್ಐ (Cat-eye) ಅಳವಡಿಸಬೇಕು.
ಜಲಪಾತಗಳ ಬಳಿ ‘ನೋ ಪಾರ್ಕಿಂಗ್’: ಹೆದ್ದಾರಿ ಪಕ್ಕದ ಜಲಪಾತ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುವುದರಿಂದ ಅಪಘಾತದ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಅಂತಹ ಸ್ಥಳಗಳಲ್ಲಿ ‘ನೋ ಪಾರ್ಕಿಂಗ್’ ಸೇರಿದಂತೆ ಎಚ್ಚರಿಕೆ ಫಲಕಗಳನ್ನು ಹಾಕಬೇಕು.
ತಿರುವುಗಳ ಮಾಹಿತಿ ಫಲಕ: ಘಟ್ಟ ಪ್ರದೇಶಗಳಲ್ಲಿ ಇಳಿಜಾರು ಆರಂಭವಾಗುವ ಸ್ಥಳದಿಂದಲೇ ಮುಂದಿನ ತಿರುವುಗಳ ಸಂಖ್ಯೆಯನ್ನು ಸೂಚಿಸುವ ಫಲಕಗಳು ಹಾಗೂ ಎಲ್ಲಾ ಸೇತುವೆಗಳ ಬಳಿ ರಾತ್ರಿ ವೇಳೆ ಸ್ಪಷ್ಟವಾಗಿ ಕಾಣುವ ಪ್ರತಿಫಲಕ (Reflector) ವ್ಯವಸ್ಥೆ ಕಲ್ಪಿಸಬೇಕು.
ಪೊಲೀಸ್ ಇಲಾಖೆಯ ಸಲಹೆಯಂತೆ ಜಿಲ್ಲೆಯ ಪ್ರಮುಖ ರಸ್ತೆಗಳು ಹಾಗೂ ಬ್ಲ್ಯಾಕ್ಸ್ಪಾಟ್ (ಅಪಘಾತ ವಲಯ) ಪ್ರದೇಶಗಳಲ್ಲಿ ಅಗತ್ಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ವೇಗಮಿತಿ ಸೂಚನಾ ಫಲಕಗಳು ಮತ್ತು ಎಚ್ಚರಿಕೆ ದೀಪಗಳನ್ನು ಅಳವಡಿಸುವ ಮೂಲಕ ಅಪಘಾತ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು.”
— ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ
ಈ ಪ್ರಮುಖ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪ ವಿಭಾಗಾಧಿಕಾರಿ ಶ್ರವಣಕುಮಾರ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.