ಜಿಗಣಿ: ಸಿನಿಮೀಯ ಮಾದರಿಯಲ್ಲಿ ಪೌಲ್ಟ್ರಿ ಫೀಡ್ಸ್ ನಡುವೆ ಅಡಗಿಸಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಜಿಗಣಿ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಸುಮಾರು 1 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ 250 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಮುಖ್ಯರಸ್ತೆಯ ಕೊಪ್ಪ ಎಂಬಲ್ಲಿ ಈ ದಾಳಿ ನಡೆದಿದೆ. ಬಿಹಾರ ಮೂಲದ ರಾಮಾಯಣ್ ಯಾದವ್ (56) ಮತ್ತು ಸಬೀರ್ ಖಾನ್ (51) ಬಂಧಿತ ಆರೋಪಿಗಳು. ಇವರು ಒರಿಸ್ಸಾದಿಂದ ಪೌಲ್ಟ್ರಿ ಫೀಡ್ಸ್ (ಕೋಳಿ ಆಹಾರ) ಸಾಗಿಸುವ ವಾಹನದಲ್ಲಿ ಯಾರಿಗೂ ಅನುಮಾನ ಬರದಂತೆ ಅತ್ಯಂತ ಚಾಣಾಕ್ಷತನದಿಂದ ಗಾಂಜಾ ಅಡಗಿಸಿ ಸಾಗಿಸುತ್ತಿದ್ದರು. ‘ಪುಷ್ಪ’ ಚಿತ್ರದಲ್ಲಿ ತೋರಿಸುವ ಮಾದರಿಯಲ್ಲೇ ಈ ಸಾಗಾಟದ ಪ್ಲಾನ್ ಮಾಡಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಜಿಗಣಿ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ, ವಾಹನವನ್ನು ತಪಾಸಣೆ ಮಾಡಿದಾಗ ಪೌಲ್ಟ್ರಿ ಫೀಡ್ಸ್ ಚೀಲಗಳ ನಡುವೆ ಬಚ್ಚಿಟ್ಟಿದ್ದ 250 ಕೆಜಿ ತೂಕದ ಗಾಂಜಾ ಪತ್ತೆಯಾಗಿದೆ. ಆರೋಪಿಗಳು ಅಂತಾರಾಜ್ಯ ಮಟ್ಟದಲ್ಲಿ ಮಾದಕ ವಸ್ತು ಜಾಲವನ್ನು ಹೊಂದಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬೃಹತ್ ಪ್ರಮಾಣದ ಗಾಂಜಾವನ್ನು ಪತ್ತೆಹಚ್ಚಿದ ಜಿಗಣಿ ಪೊಲೀಸರ ಸಾಹಸವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಚಂದ್ರಕಾಂತ್ ಅವರು ಶ್ಲಾಘಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಸೂಕ್ತ ಬಹುಮಾನ ಹಾಗೂ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
