ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಪೊಲೀಸ್ ವಶದಲ್ಲಿರುವ ಆರೋಪಿಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಅಥವಾ ಕಸ್ಟೊಡಿಯಲ್ ಡೆತ್ (ಲಾಕಪ್ ಮರಣ) ಸಂಭವಿಸಿದರೆ, ತಕ್ಷಣವೇ ಸ್ಥಳೀಯ ಠಾಣಾಧಿಕಾರಿ ಕಡ್ಡಾಯವಾಗಿ ಎಫ್ಐಆರ್ (FIR) ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಎಂ.ಎ. ಸಲೀಂ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯ ಹಾಗೂ ಲಾಕಪ್ ಡೆತ್ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ.
ಇಂತಹ ಸೂಕ್ಷ್ಮ ಪ್ರಕರಣಗಳ ತನಿಖಾ ಅವಧಿಯಲ್ಲಿ ಸ್ಥಳೀಯ ಪೊಲೀಸರಿಂದ ನಡೆಯಬಹುದಾದ ತನಿಖಾ ವೈಫಲ್ಯ ಹಾಗೂ ಸಾಕ್ಷ್ಯನಾಶದ ಯತ್ನಗಳನ್ನು ತಡೆಯುವ ಪ್ರಮುಖ ಉದ್ದೇಶದಿಂದ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
ದೌರ್ಜನ್ಯ ಅಥವಾ ಕಸ್ಟೋಡಿಯಲ್ ಡೆತ್ ನಡೆದ ತಕ್ಷಣವೇ ಠಾಣೆಯಲ್ಲಿರುವ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಠಾಣಾಧಿಕಾರಿ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು. ಅಲ್ಲದೆ, ಘಟನೆಯ ಸಂಪೂರ್ಣ ವರದಿಯನ್ನು ವಿಳಂಬ ಮಾಡದೆ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಕರಣ ನಡೆದಾಗ ಸ್ಥಳೀಯ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡುವುದು, ಸ್ಥಳ ಮಹಜರು ನಡೆಸುವುದು ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿದ್ದವು. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದಾಗಿ ಮುಂದೆ ನಡೆಯುವ ಸಿಐಡಿ (CID) ತನಿಖೆಗೂ ತೀವ್ರ ಅಡ್ಡಿಯಾಗುತ್ತಿತ್ತು. ಈ ಎಲ್ಲಾ ಲೋಪದೋಷಗಳಿಗೆ ಬ್ರೇಕ್ ಹಾಕಲು ಈಗ ಹೊಸ ಆದೇಶದ ಮೊರೆ ಹೋಗಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಈ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಇಲಾಖಾ ಮಟ್ಟದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
ವಿಡಿಯೋ ರೇಕಾರ್ಡಿಂಗ್ ಕಡ್ಡಾಯ: ಸಂತ್ರಸ್ತರ ಹೇಳಿಕೆಗಳು ಮತ್ತು ಶವಪರೀಕ್ಷೆಯ (Post-mortem) ಇಡೀ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಆಡಿಯೊ ಹಾಗೂ ವಿಡಿಯೊ ರೆಕಾರ್ಡ್ ಮಾಡಿಕೊಳ್ಳಬೇಕು.
ಸ್ಥಳ ಪರಿಶೀಲನೆ: ಪ್ರಕರಣವು ಸಿಐಡಿ ತನಿಖೆಗೆ ವರ್ಗಾವಣೆಯಾದ ಬಳಿಕ ತನಿಖಾಧಿಕಾರಿಗಳು ಹಳೆಯ ಡೈರಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ತಾವೇ ಖುದ್ದಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ಪ್ರಕ್ರಿಯೆ ಸರಿಯಾಗಿ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಪ್ರಾಸಿಕ್ಯೂಷನ್ ಅನುಮತಿ: ಆರೋಪಿತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ವಿರುದ್ಧ ಕೋರ್ಟ್ಗೆ ದೋಷಾರೋಪಪಟ್ಟಿ (Charge sheet) ಸಲ್ಲಿಸುವ ಮುನ್ನ ಸೂಕ್ತ ಪ್ರಾಧಿಕಾರದಿಂದ ಕಡ್ಡಾಯವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ಪಡೆಯಬೇಕು.
ಪಾರದರ್ಶಕತೆ: ಹಿಂಸಾಚಾರ ಹಾಗೂ ಲಾಕಪ್ ಡೆತ್ ಪ್ರಕರಣಗಳ ತನಿಖೆಯ ವೇಳೆ ಸ್ಥಳೀಯ ಪೊಲೀಸರು ಯಾವುದೇ ರೀತಿಯ ಪ್ರಭಾವ ಬೀರದಂತೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸದಂತೆ ತಡೆಯಲು ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಬೇಕು.
”ಪ್ರಕರಣಗಳ ತನಿಖೆ ವೇಳೆ ಯಾವುದೇ ಹಂತದಲ್ಲಿ ನಿಯಮ ಉಲ್ಲಂಘನೆಯಾಗಲಿ ಅಥವಾ ಲೋಪದೋಷಗಳಾಗಲಿ ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ತನಿಖಾಧಿಕಾರಿ ಅಥವಾ ಪೊಲೀಸ್ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು.”
— ಎಂ.ಎ. ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕರು