ಕೊಟ್ಟೂರು: ವಿಂಡ್ ಫ್ಯಾನ್ ವಿದ್ಯುತ್ ಕಂಬದ ಅಲ್ಯೂಮಿನಿಯಂ ವೈರ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವನ್ನು ಪತ್ತೆಹಚ್ಚುವಲ್ಲಿ ಕೊಟ್ಟೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತರಜಿಲ್ಲಾ ಕಿಲಾಡಿ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಒಟ್ಟು 10.5 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಂಡ್ ಫ್ಯಾನ್ (ಪವನ ವಿದ್ಯುತ್) ಕಂಬಗಳ ಅಲ್ಯೂಮಿನಿಯಂ ವೈರ್ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.
ಬಂಧಿತ ಆರೋಪಿಗಳಿಂದ ಸದ್ಯ ಈ ಕೆಳಗಿನ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ:
ನಗದು ಹಣ: ವೈರ್ ಮಾರಾಟ ಮಾಡಿದ್ದ ₹3,00,000/- ನಗದು ಜಪ್ತಿ.
ಅಲ್ಯೂಮಿನಿಯಂ ವೈರ್: ಕಳವು ಮಾಡಲಾಗಿದ್ದ ಅಂದಾಜು ₹4,00,000/- ಮೌಲ್ಯದ ಭಾರಿ ಪ್ರಮಾಣದ ಅಲ್ಯೂಮಿನಿಯಂ ವೈರ್.
ಗೂಡ್ಸ್ ವಾಹನ: ಕಳ್ಳತನಕ್ಕೆ ಮತ್ತು ವೈರ್ ಸಾಗಾಟಕ್ಕೆ ಬಳಸುತ್ತಿದ್ದ ಅಂದಾಜು ₹3,50,000/- ಬೆಲೆ ಬಾಳುವ ಗೂಡ್ಸ್ ವಾಹನ.
ದುರ್ಗಮ ಹಾಗೂ ಜನರಿಲ್ಲದ ಪ್ರದೇಶಗಳಲ್ಲಿರುವ ವಿಂಡ್ ಮಿಲ್ ಆವರಣದಲ್ಲಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡುತ್ತಿದ್ದ ಕಳ್ಳರನ್ನು ಅತ್ಯಂತ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಕೊಟ್ಟೂರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯನ್ನು ವಿಜಯನಗರ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರು (SP) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಇಡೀ ತಂಡಕ್ಕೆ ಪ್ರಶಂಸನಾ ಪತ್ರ ಹಸ್ತಾಂತರಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದಲ್ಲಿ ಇನ್ನುಳಿದ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಕೊಟ್ಟೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.