ಚಿಕ್ಕಮಗಳೂರು: ನಗರದಲ್ಲಿ ಕೃತಕ ರಾಸಾಯನಿಕಗಳನ್ನು ಬಳಸಿ ನಕಲಿ ನಾಟಿ ತುಪ್ಪ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಆಹಾರ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖೆಯ ಅಧಿಕಾರಿ ನಾಗರತ್ನ ಅವರ ನೇತೃತ್ವದ ತಂಡ, ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿದೆ.
ಡಾಲ್ಡಾ, ಕೆಮಿಕಲ್ ಬಳಸಿ ತುಪ್ಪ ತಯಾರಿಕೆ:
ದಾಳಿಯ ವೇಳೆ ಡಾಲ್ಡಾ, ವನಸ್ಪತಿ ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರಣ ಮಾಡಿ ನಕಲಿ ನಾಟಿ ತುಪ್ಪ ತಯಾರಿಸುತ್ತಿರುವುದು ಕಂಡುಬಂದಿದೆ. ನೈಜ ನಾಟಿ ತುಪ್ಪದಂತೆ ಕಾಣಲು ಹಾಗೂ ಹಳದಿ ಬಣ್ಣ ಬರಲು ಬಣ್ಣದ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂಬುದು ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಲ್ಲಿ ದೃಢಪಟ್ಟಿದೆ.
ಹಳ್ಳಿಗಳಲ್ಲಿ ಮಾರಾಟ, 3 ಬೈಕ್ ಜಪ್ತಿ:
ತಯಾರಿಸಿದ ನಕಲಿ ತುಪ್ಪವನ್ನು ಗ್ರಾಮೀಣ ಭಾಗಗಳಿಗೆ ಕೊಂಡೊಯ್ದು ಶುದ್ಧ ನಾಟಿ ತುಪ್ಪವೆಂದು ನಂಬಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಘಟನಾ ಸ್ಥಳದಲ್ಲಿದ್ದ ಬಳ್ಳಾರಿ ನೋಂದಣಿ ಹೊಂದಿರುವ ಮೂರು ದ್ವಿಚಕ್ರ ವಾಹನಗಳನ್ನು (ಬೈಕ್) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ತನಿಖೆಯಲ್ಲಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Arakshakara Times Media
Related posts
