ಚೆನ್ನೈ: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರ ತನ್ನ ಮೊದಲ ಬಜೆಟ್‌ನಲ್ಲೇ ಸಾಮಾಜಿಕ ಕಲ್ಯಾಣ, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣಾಭಿವೃದ್ಧಿಗೆ ಬೃಹತ್ ಅನುದಾನ ಘೋಷಿಸುವ ಮೂಲಕ ಸಂಚಲನ ಮೂಡಿಸಿದೆ. ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಮಂಡಿಸಿದ ಬಜೆಟ್‌ನಲ್ಲಿ ಜನಪ್ರಿಯ ಕೊಡುಗೆಗಳು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಬಜೆಟ್‌ನ ಪ್ರಮುಖ ಮುಖ್ಯಾಂಶಗಳು:
’ಅಣ್ಣನ್ ಸೀರ್’ ಯೋಜನೆ (ವಧುಗಳಿಗೆ ವಿಶೇಷ ಕೊಡುಗೆ):
ತಮಿಳುನಾಡಿನ ಮಹಿಳೆಯರನ್ನು ತಮ್ಮ ಒಡಹುಟ್ಟಿದ ತಂಗಿಯರಂತೆ ಕಾಣುವ ಸಿಎಂ ವಿಜಯ್, ಪ್ರತಿಯೊಬ್ಬ ವಧುವಿಗೆ ಅವರ ಮದುವೆಯ ಸಂದರ್ಭದಲ್ಲಿ 8 ಗ್ರಾಂ (1 ಪವನ್) ಚಿನ್ನದ ನಾಣ್ಯ ಹಾಗೂ ರೇಷ್ಮೆ ಸೀರೆ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಗಾಗಿ ಬಜೆಟ್‌ನಲ್ಲಿ ₹812 ಕೋಟಿ ಮೀಸಲಿಡಲಾಗಿದೆ.
’ತಾಯ್ ಮಾಮನ್ ತಂಗ ಮೋದಿರ ತಿಟ್ಟಂ’ (ನವಜಾತ ಶಿಶುಗಳಿಗೆ ಚಿನ್ನ):
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಸಿಎಂ ವಿಜಯ್ ಅವರ ಪರವಾಗಿ 1 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲಾಗುವುದು. ಇದಕ್ಕಾಗಿ ₹560 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.
’ವೆಟ್ರಿ ಮಗಳಿರ್’ ಆಡು ಸಾಕಾಣಿಕೆ ಯೋಜನೆ:
ಅನಾಥ ವಿಧವೆಯರು, ಪರಿತ್ಯಕ್ತ ಮಹಿಳೆಯರು, ತೃತೀಯಲಿಂಗಿಗಳು ಮತ್ತು ವಿಕಲಚೇತನರ ಜೀವನೋಪಾಯಕ್ಕೆ ಬೆಂಬಲ ನೀಡಲು ಶೇ.100 ರಷ್ಟು ಸಬ್ಸಿಡಿಯೊಂದಿಗೆ 5 ಮೇಕೆ ಅಥವಾ ಕುರಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ. ಇದರಿಂದ ಸುಮಾರು 30,000 ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ₹110 ಕೋಟಿ ವಿನಿಯೋಗಿಸಲಾಗುವುದು.
ಉಚಿತ ಹೈನು ಹಸುಗಳ ವಿತರಣೆ:
ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡಿನಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವರ್ಷಕ್ಕೆ 10,000 ಅರ್ಹ ಮಹಿಳೆಯರಿಗೆ ಉಚಿತವಾಗಿ ಹೈನು ಹಸುಗಳನ್ನು ವಿತರಿಸಲು ₹57 ಕೋಟಿ ಕಾಯ್ದಿರಿಸಲಾಗಿದೆ.
ಮೀನುಗಾರ ಸಮುದಾಯಕ್ಕೆ ಸವಲತ್ತು:
ಮೀನುಗಾರಿಕೆ ನಿಷೇಧಿತ ಹಾಗೂ ಸಂಕಷ್ಟದ ಅವಧಿಯ ಮಾಸಿಕ ಸಹಾಯಧನವನ್ನು ₹6,000 ದಿಂದ ₹7,000 ಕ್ಕೆ ಏರಿಸಲಾಗಿದೆ. ಇದರಿಂದ 1.93 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದ್ದು (ವೆಚ್ಚ: ₹135 ಕೋಟಿ), ಆಧುನಿಕ ಆಳಸಮುದ್ರ ಮೀನುಗಾರಿಕೆ ದೋಣಿಗಳಿಗೆ ₹12 ಕೋಟಿ ಬಡ್ಡಿ ಸಬ್ಸಿಡಿ ಘೋಷಿಸಲಾಗಿದೆ.
ಚೆನ್ನೈಗೆ 1,000 ಇ-ಬಸ್‌ಗಳು:
ರಾಜಧಾನಿ ಚೆನ್ನೈನ MTC ಸಾರಿಗೆ ಸಂಸ್ಥೆಗೆ 1,000 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಡಿಪೋ ಮೂಲಸೌಕರ್ಯ ಮತ್ತು ತಾಂತ್ರಿಕ ಸೌಲಭ್ಯಗಳಿಗಾಗಿ ₹500 ಕೋಟಿ ಅನುದಾನ ನೀಡಲಾಗಿದೆ.
ಸಾಮಾಜಿಕ ಕಲ್ಯಾಣ ಯೋಜನೆಗಳ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಟಿವಿ ಕೆ ಸರ್ಕಾರದ ಈ ಚೊಚ್ಚಲ ಬಜೆಟ್ ರಾಜ್ಯದಾದ್ಯಂತ ತೀವ್ರ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.