ಬೆಂಗಳೂರು: ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ, ಸಾಮಾಜಿಕ ಕಾರ್ಯಕರ್ತ ವಿನೋದ್ ಕರ್ತವ್ಯ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ‘ಪರಿಸರ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ನಗರದ ಯಮಲೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ‘ಮಿಡಿತ ಫೌಂಡೇಶನ್’ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಮಾತಾ ಮಂಜಮ್ಮ ಜೋಗತಿ ಅವರು ವಿನೋದ್ ಕರ್ತವ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ವಿನೋದ್ ಕರ್ತವ್ಯ ಅವರು ‘ಬೆಂಗಳೂರು ಹುಡುಗರು’ ತಂಡದ ಮೂಲಕ ಕಳೆದ ಹಲವು ವರ್ಷಗಳಿಂದ ಪರಿಸರ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದಾರೆ. ನಗರದಲ್ಲಿ ನೂರಾರು ಗಿಡಗಳನ್ನು ನೆಟ್ಟು ಪೋಷಿಸುವುದು, ಮರಗಳಿಗೆ ಹೊಡೆದಿರುವ ಆಣಿ/ಮೊಳೆಗಳನ್ನು ತೆರವುಗೊಳಿಸುವ ‘ಮೊಳೆ ಮುಕ್ತ ಮರ ಅಭಿಯಾನ’ ನಡೆಸುವುದು ಹಾಗೂ ಬೆಂಗಳೂರಿನ ಜೀವನದಿಯಾದ ವೃಷಭಾವತಿ ನದಿಯ ಪುನರುಜ್ಜೀವನ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಶ್ಲಾಘನೀಯ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇವರ ಹಸಿರು ಅಭಿಯಾನ ಮತ್ತು ಜಲ ಸಂರಕ್ಷಣೆಯ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮಿಡಿತ ಫೌಂಡೇಶನ್‌ನ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಶಾ ರೆಡ್ಡಿ, ವಿ. ದಾಸಣ್ಣ, ನಾಟಕಕಾರ ಸಿಂಹಾದ್ರಿ, ನಿರೂಪಕಿ ಲಕ್ಷ್ಮಿ ಬಾಗಲಕೋಟೆ, ವಲಯ ಅರಣ್ಯಾಧಿಕಾರಿಗಳು (RFO) ಹಾಗೂ ಹಲವು ರಂಗಗಳ ಗಣ್ಯರು ಉಪಸ್ಥಿತರಿದ್ದರು.


