Share News

ಮಾಪುಸಾ (ಗೋವಾ): ರಸ್ತೆಬದಿಯಲ್ಲಿ ಕಸ ಎಸೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ತೀವ್ರ ಟ್ರೋಲಿಂಗ್‌ಗೆ ಒಳಗಾಗಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಮನನೊಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಉತ್ತರ ಗೋವಾದ ಮಾಪುಸಾದಲ್ಲಿ ನಡೆದಿದೆ.

​ದ್ವಿತೀಯ ವರ್ಷದ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದ ಸ್ಯಾಮ್ಯುಯೆಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ವಿದ್ಯಾರ್ಥಿ. ಈತ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ವಾಸವಾಗಿದ್ದ ಎಂದು ತಿಳಿದುಬಂದಿದೆ.

​ಕೆಲ ದಿನಗಳ ಹಿಂದೆ ಸ್ಯಾಮ್ಯುಯೆಲ್ ಉತ್ತರ ಗೋವಾದ ರಸ್ತೆಬದಿಯೊಂದರಲ್ಲಿ ಕಸ ಎಸೆಯುತ್ತಿದ್ದ ದೃಶ್ಯವನ್ನು ಸ್ಥಳೀಯರು ವೀಡಿಯೋ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಕಸ ಎಸೆದ ವಿದ್ಯಾರ್ಥಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆತನನ್ನು ಗುರಿಯಾಗಿಸಿಕೊಂಡು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು.

ವೀಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಗೋವಾ ಪೊಲೀಸರು ಸ್ಯಾಮ್ಯುಯೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಪೊಲೀಸರ ನೋಟಿಸ್‌ಗೆ ಗೌರವ ನೀಡಿದ್ದ ವಿದ್ಯಾರ್ಥಿ, ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದ ಎನ್ನಲಾಗಿದೆ.

ಪೊಲೀಸ್ ಪ್ರಕರಣ ದಾಖಲಾದ ಬಳಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಟ್ರೋಲ್‌ಗಳಿಂದಾಗಿ ತೀವ್ರ ಮುಜುಗರ ಮತ್ತು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸ್ಯಾಮ್ಯುಯೆಲ್, ಕೊನೆಗೆ ಕಠಿಣ ನಿರ್ಧಾರ ಕೈಗೊಂಡಿದ್ದಾನೆ. ಮನೆಯಲ್ಲಿದ್ದ ಕುಟುಂಬಕ್ಕೆ ಸೇರಿದ ಪರವಾನಗಿ ಪಡೆದ ಬಂದೂಕಿನಿಂದ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ.

​ಗುಂಡಿನ ಸದ್ದು ಕೇಳಿ ತಕ್ಷಣವೇ ಧಾವಿಸಿದ ಕುಟುಂಬಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

​ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ (Accidental Death Report) ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಅತಿಯಾದ ಟ್ರೋಲಿಂಗ್ ಹಾಗೂ ಸೈಬರ್ ಬುಲ್ಲಿಂಗ್ ಒಂದು ಉದಯೋನ್ಮುಖ ಜೀವವನ್ನು ಬಲಿಪಡೆದಿರುವುದು ಸ್ಥಳೀಯವಾಗಿ ತೀವ್ರ ಆಘಾತ ಮೂಡಿಸಿದೆ.

ವರದಿ :- ಗಿಲ್ಬರ್ಟ್. ಜೆ


Share News