Share News

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SC/ST) ಪ್ರತಿಭಾವಂತ ವಿದ್ಯಾರ್ಥಿಗಳು ಆಡಳಿತ ಮಂಡಳಿ ಕೋಟಾದಡಿ ಎಂಬಿಬಿಎಸ್ (MBBS) ಪ್ರವೇಶ ಪಡೆಯಲು ಪಿಯುಸಿಯಲ್ಲಿ ನಿಗದಿಪಡಿಸಿರುವ ಕನಿಷ್ಠ ಶೇಕಡಾವಾರು ಅಂಕಗಳನ್ನು ಶೇ.95 ರಿಂದ ಶೇ.90 ಕ್ಕೆ ಇಳಿಸಬೇಕು ಹಾಗೂ ನೀಡಲಾಗುವ ಪ್ರೋತ್ಸಾಹಧನವನ್ನು ₹50 ಲಕ್ಷದಿಂದ ₹80 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಮನವಿ ಮಾಡಿದ್ದಾರೆ.

​ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ನಡುವೆಯೂ ಎಸ್‌ಸಿ/ಎಸ್‌ಟಿ ಸಮುದಾಯದ ಹಲವು ವಿದ್ಯಾರ್ಥಿಗಳು ಪಿಯುಸಿ ಮತ್ತು ನೀಟ್ (NEET) ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ ವೈದ್ಯಕೀಯ ಶಿಕ್ಷಣದ ವೆಚ್ಚ ಗಣನೀಯವಾಗಿ ಹೆಚ್ಚಿರುವುದರಿಂದ, ಸರ್ಕಾರಿ ಕೋಟಾದಡಿ ಸೀಟು ಸಿಗದ ಬಡ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕೋಟಾದಲ್ಲಿ ಕೋರ್ಸ್ ಮುಂದುವರಿಸುವುದು ಕಷ್ಟಸಾಧ್ಯವಾಗಿದೆ.

​ಯೋಜನೆಯ ಪರಿಷ್ಕರಣೆಗೆ ಮುಖ್ಯ ಪ್ರಸ್ತಾಪಗಳು:

​ಕನಿಷ್ಠ ಅಂಕದ ಮಿತಿ ಇಳಿಕೆ: ಪಿಯುಸಿಯಲ್ಲಿ ಶೇ. 95 ಕ್ಕಿಂತ ಹೆಚ್ಚು ಅಂಕಗಳ ಮಾನದಂಡ ಅತ್ಯಂತ ಕಠಿಣವಾಗಿದ್ದು, ಅರ್ಹ ನೀಟ್ ರ್ಯಾಂಕ್ ಹೊಂದಿರುವ ಅನೇಕ ಬಡ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ, ಕನಿಷ್ಠ ಅಂಕದ ಮಿತಿಯನ್ನು ಶೇ. 90 ಕ್ಕೆ ಇಳಿಸಬೇಕು.

​ಪ್ರೋತ್ಸಾಹಧನ ಹೆಚ್ಚಳ: ಪ್ರಸ್ತುತ ನೀಡಲಾಗುತ್ತಿರುವ ₹50 ಲಕ್ಷ ಪ್ರೋತ್ಸಾಹಧನವು ಕಾಲೇಜು ಶುಲ್ಕ, ವಸತಿ ನಿಲಯ (ಹಾಸ್ಟೆಲ್), ಪುಸ್ತಕ, ಉಪಕರಣ ಹಾಗೂ ಪರೀಕ್ಷಾ ವೆಚ್ಚಗಳಿಗೆ ಸಾಕಾಗುತ್ತಿಲ್ಲ. ಆದ್ದರಿಂದ ಈ ಮೊತ್ತವನ್ನು ₹80 ಲಕ್ಷಕ್ಕೆ ಹೆಚ್ಚಿಸಬೇಕು.

​ಸಮಗ್ರ ಅರ್ಹತಾ ಮಾನದಂಡ: ವಿದ್ಯಾರ್ಥಿಯ ಅರ್ಹತೆಯನ್ನು ಕೇವಲ ಪಿಯುಸಿ ಅಂಕಗಳ ಆಧಾರದ ಮೇಲಷ್ಟೇ ನಿರ್ಧರಿಸದೇ, ನೀಟ್ ರ್ಯಾಂಕ್, ಕುಟುಂಬದ ವಾರ್ಷಿಕ ಆದಾಯ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು.

​ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಈ ಸಂಬಂಧಿತ ಆದೇಶವನ್ನು ಪರಿಷ್ಕರಿಸಿ, ಪ್ರೋತ್ಸಾಹಧನ ಯೋಜನೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿಸಬೇಕು ಎಂದು ಮೋಹನ್ ಕುಮಾರ್ ದಾನಪ್ಪ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.


Share News