ಇತ್ತೀಚೆಗೆ ನಡೆದ ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಭಾರಿ ಯಶಸ್ಸು ಸಾಧಿಸಿದ್ದು, ಒಟ್ಟು 11 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನಗಳು ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್ ರವರು ಈ ಪ್ರಮುಖ ಕಾರ್ಯಾಚರಣೆಗಳ ಸುದೀರ್ಘ ಮಾಹಿತಿ ನೀಡಿದರು.
ವಿವಿಧ ಪ್ರಕರಣಗಳ ವಿವರಗಳು:
ಡಕಾಯಿತಿ ಪ್ರಕರಣ: ಡಕಾಯಿತಿಯಲ್ಲಿ ತೊಡಗಿದ್ದ 4 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ 1 ಆಟೋ, 2 ಸ್ಕೂಟರ್ಗಳು, ಚಿನ್ನದ ಚೈನ್ನ ತುಂಡು ಹಾಗೂ ₹30,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬೈಕ್ ಕಳ್ಳತನ ಜಾಲ ಪತ್ತೆ: ಜಿಲ್ಲೆಯ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 2 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹10 ಲಕ್ಷ ಮೌಲ್ಯದ 9 ಮೋಟಾರ್ ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
ಅಪಹರಣ ಮತ್ತು ದರೋಡೆ: ಅಪಹರಣ ಹಾಗೂ ದರೋಡೆ ಎಸಗಿದ್ದ 4 ಜನ ಆರೋಪಿಗಳನ್ನು ಬಂಧಿಸಿ, ₹4.30 ಲಕ್ಷ ನಗದು, 2 ಕಾರುಗಳು, 1 ಬೈಕ್ ಮತ್ತು 5 ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ವೇಳೆ ಹೆಚ್ಚುವರಿಯಾಗಿ ಮತ್ತೂ 2 ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ.
ಮನೆ ಕಳ್ಳತನ ಭೇದನೆ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ 1 ಆರೋಪಿಯನ್ನು ಬಂಧಿಸಿ, ಆತನಿಂದ ಬರೋಬ್ಬರಿ ₹12 ಲಕ್ಷ ಮೌಲ್ಯದ 94 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪೊಲೀಸ್ ಸಿಬ್ಬಂದಿಗೆ ಶ್ಲಾಘನೆ:
ಕ್ಲಿಷ್ಟಕರವಾಗಿದ್ದ ಈ ಸಾಲು ಸಾಲು ಅಪರಾಧ ಪ್ರಕರಣಗಳನ್ನು ಕ್ಷಿಪ್ರವಾಗಿ ಭೇದಿಸಿ, ಕಳುವಾದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿ, ಪ್ರಶಂಸನಾ ಪತ್ರ ವಿತರಿಸಿದರು.

