Share News

ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಚಿತ್ರದುರ್ಗದ ಭೀಮಸಮುದ್ರ ಕ್ಯಾಂಪ್‌ನಲ್ಲಿ ನಡೆದಿದೆ. ನ್ಯಾಯಾಲಯದಲ್ಲಿರುವ ಪ್ರಕರಣದ ರಾಜಿ ವಿಚಾರದಲ್ಲಿ ನಡೆದ ಕಿರಿಕ್, ದೊಡ್ಡಪ್ಪನಿಂದಲೇ ತಮ್ಮನ ಮಗನ ಹತ್ಯೆಗೆ ಕಾರಣವಾಗಿದೆ.

ಹತ್ಯೆಯಾದ ಯುವಕನನ್ನು ಕಾಂತರಾಜ್ (34) ಎಂದು ಗುರುತಿಸಲಾಗಿದೆ. ಆತನ ದೊಡ್ಡಪ್ಪ ನರಸಿಂಹಪ್ಪ ಕೊಲೆ ಮಾಡಿದ ಆರೋಪಿ. 2020ರಲ್ಲಿ ಇವರಿಬ್ಬರ ನಡುವೆ ಸಣ್ಣ ವಿಷಯಕ್ಕಾಗಿ ಗಲಾಟೆ ನಡೆದಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ವಿಚಾರಣೆ (Trial) ಆರಂಭವಾಗಿತ್ತು.

ನ್ಯಾಯಾಲಯದಲ್ಲಿ ಕೇಸ್‌ ನಡೆಯುತ್ತಿರುವುದರಿಂದ ಬೇಸತ್ತಿದ್ದ ಆರೋಪಿ ನರಸಿಂಹಪ್ಪ, ಈ ಪ್ರಕರಣವನ್ನು ರಾಜಿ ಮಾಡಿಕೊಳ್ಳುವಂತೆ ಕಾಂತರಾಜ್ ಬಳಿ ಕೇಳಿಕೊಂಡಿದ್ದ. ಆದರೆ, ರಾಜಿ ಮಾಡಿಕೊಳ್ಳಲು ಕಾಂತರಾಜ್ 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.

ಇದೇ ವಿಚಾರವಾಗಿ ನಿನ್ನೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ನರಸಿಂಹಪ್ಪ ಕಲ್ಲಿನಿಂದ ಕಾಂತರಾಜ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಕಾಂತರಾಜ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ನರಸಿಂಹಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


Share News