ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಿ ಅಪಘಾತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಿಗೆ (DG & IGP) ಪತ್ರ ಬರೆದಿದ್ದಾರೆ.
ಶಾಲೆ-ಕಾಲೇಜುಗಳಿಗೆ ರಜೆ ಇರುವ ಕಾರಣ, ಪೋಷಕರು ತಮ್ಮ ಮಕ್ಕಳಿಗೆ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ನೀಡುತ್ತಿರುವುದು ಕಂಡುಬರುತ್ತಿದೆ. ಇದು ರಸ್ತೆ ಸುರಕ್ಷತೆಗೆ ದೊಡ್ಡ ಸವಾಲಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ತಪಾಸಣೆ ನಡೆಸಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮೋಹನ್ ಕುಮಾರ್ ದಾನಪ್ಪ ತಿಳಿಸಿದ್ದಾರೆ.
ಮಾಧ್ಯಮ ಮತ್ತು ರೇಡಿಯೋ: ಪ್ರಮುಖ ಸುದ್ದಿ ವಾಹಿನಿಗಳು ಹಾಗೂ ಎಫ್.ಎಂ ರೇಡಿಯೋಗಳ ಮೂಲಕ ಪೋಷಕರಿಗೆ ಎಚ್ಚರಿಕೆ ನೀಡುವ ಸಂದೇಶ ರವಾನಿಸುವುದು.
ಸಾಮಾಜಿಕ ಜಾಲತಾಣ: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಜಾಗೃತಿ ಅಭಿಯಾನ ನಡೆಸುವುದು.
ಸಾರ್ವಜನಿಕ ವಲಯ: ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ.
ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವ ಪೋಷಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮಕ್ಕಳ ಜೀವದ ಜೊತೆ ಆಟವಾಡದೆ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಈ ಪತ್ರದ ಮೂಲಕ ಮನವಿ ಮಾಡಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗಿ ಅಹಿತಕರ ಘಟನೆಗಳನ್ನು ತಡೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
