ಶಿವಮೊಗ್ಗ (ದೊಡ್ಡಪೇಟೆ): ಬ್ಯಾಂಕ್ಗಳಿಗೆ ಬಂಗಾರ ಲೇಪಿತ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಅಂತರಜಿಲ್ಲಾ ವಂಚಕರ ಜಾಲವನ್ನು ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಎ೧ (A1) ಕಿಂಗ್ಪಿನ್, ತೀರ್ಥಹಳ್ಳಿ ಮೂಲದ ಲೋಕೇಶ (39) ಎಂಬಾತನನ್ನು ಬಂಧಿಸಲಾಗಿದ್ದು, ಇವರಿಂದ ಸುಮಾರು 28 ಲಕ್ಷಕ್ಕೂ ಅಧಿಕ ಮೌಲ್ಯದ ಮಾಲನ್ನು ಜಪ್ತಿ ಮಾಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ (PNB) ಮ್ಯಾನೇಜರ್ ಕ್ರಾಂತಿಕುಮಾರ್ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಹೊಸ ಕಾನೂನು ‘ಭಾರತೀಯ ನ್ಯಾಯ ಸಂಹಿತೆ (BNS) 2023’ ರ ಅಡಿಯಲ್ಲಿ ಖದೀಮರ ವಿರುದ್ಧ ಎಫ್ಐಆರ್ (FIR) ದಾಖಲಿಸಿಕೊಳ್ಳಲಾಗಿದೆ.
ಬ್ಯಾಂಕ್ನ ಗೋಲ್ಡ್ ಅಪ್ರೈಸರ್ (ಚಿನ್ನದ ಪರಿಶೀಲಕ) ರವಿಶಂಕರ್ ಸೇರಿದಂತೆ ಒಟ್ಟು ಐದು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ವಂಚನೆ ಜಾಲದ ಆಳ ತನಿಖೆ ಮುಂದುವರಿದಿದೆ.
ಕಿಂಗ್ಪಿನ್ ಬಂಧನ: ಪೊಲೀಸರ ಜಾಲಕ್ಕೆ ಬಿದ್ದ ಪ್ರಮುಖ ಆರೋಪಿ ತೀರ್ಥಹಳ್ಳಿಯ ಲೋಕೇಶನಿಂದ 419.824 ಗ್ರಾಂ ತೂಕದ ಬಂಗಾರ ಲೇಪಿತ ನಕಲಿ ಚಿನ್ನಾಭರಣಗಳನ್ನು ಸೀಜ್ ಮಾಡಲಾಗಿದೆ.
ಭಾರಿ ಮೌಲ್ಯದ ಮಾಲು ಜಪ್ತಿ: ಬಂಧಿತನಿಂದ ಸದ್ಯಕ್ಕೆ 28 ಲಕ್ಷಕ್ಕೂ ಅಧಿಕ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಳಿದ ಆರೋಪಿಗಳಿಗಾಗಿ ತಲಾಷ್: ವಂಚನೆ ಜಾಲದಲ್ಲಿ ಭಾಗಿಯಾಗಿರುವ ಬ್ಯಾಂಕ್ ಅಪ್ರೈಸರ್ ರವಿಶಂಕರ್, ‘ವೈಟ್ ಗೋಲ್ಡ್’ ಕಂಪನಿಯ ಮ್ಯಾನೇಜರ್ ಶರತ್, ಹಾಗೂ ಸುಧಾ ಮತ್ತು ರಾಹುಲ್ ಎಂಬುವವರು ಸದ್ಯ ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಲೋಕೇಶ ಹಾಗೂ ಇತರೆ ಆರೋಪಿಗಳು ನಕಲಿ ಚಿನ್ನಾಭರಣಗಳಿಗೆ ಅಸಲಿ ಚಿನ್ನದಂತೆ ಹೊಳಪು (ಕೋಟಿಂಗ್) ನೀಡಿ ಬ್ಯಾಂಕ್ಗಳಿಗೆ ತರುತ್ತಿದ್ದರು. ಬ್ಯಾಂಕ್ನ ಗೋಲ್ಡ್ ಅಪ್ರೈಸರ್ ರವಿಶಂಕರ್ ಈ ವಂಚಕರಿಗೆ ಸಾಥ್ ನೀಡಿ, ಅದು ಅಸಲಿ ಚಿನ್ನವೆಂದು ದೃಢೀಕರಿಸಿ ಬ್ಯಾಂಕ್ನಿಂದ ಲಕ್ಷಾಂತರ ರೂಪಾಯಿ ಸಾಲ ಮಂಜೂರು ಮಾಡಿಸುತ್ತಿದ್ದ ಎಂದು ಶಂಕಿಸಲಾಗಿದೆ. ಈ ಜಾಲಕ್ಕೆ ಖಾಸಗಿ ಗೋಲ್ಡ್ ಲೋನ್ ಕಂಪನಿಗಳ ಮ್ಯಾನೇಜರ್ಗಳು ಕೂಡ ಒಳಗಿನಿಂದ ಲಿಂಕ್ ಹೊಂದಿರುವ ಅನುಮಾನ ವ್ಯಕ್ತವಾಗಿದೆ.
ಈ ಖದೀಮರ ತಂಡ ಕೇವಲ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರವಲ್ಲದೆ, ಜಿಲ್ಲೆಯ ಹಾಗೂ ರಾಜ್ಯದ ಬೇರೆ ಬೇರೆ ಬ್ಯಾಂಕುಗಳಿಗೂ ಇದೇ ರೀತಿ ನಕಲಿ ಚಿನ್ನವಿಟ್ಟು ಕೋಟ್ಯಂತರ ರೂಪಾಯಿ ಲೋನ್ ಪಡೆದು ವಂಚಿಸಿರುವ ದಟ್ಟ ಶಂಕೆ ವ್ಯಕ್ತವಾಗಿದ್ದು, ತನಿಖೆ ಆ ನಿಟ್ಟಿನಲ್ಲಿ ಸಾಗಿದೆ.
ದೊಡ್ಡಪೇಟೆ ಪೊಲೀಸ್ ಇನ್ಸ್ಪೆಕ್ಟರ್ (PI) ಸತ್ಯನಾರಾಯಣ ಹಾಗೂ ಸಬ್ ಇನ್ಸ್ಪೆಕ್ಟರ್ (PSI) ನಾರಾಯಣ ಮಧುಗಿರಿ ನೇತೃತ್ವದ ದಕ್ಷ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಈ ಹಗರಣ ತೀವ್ರ ಸಂಚಲನ ಮೂಡಿಸಿದೆ.