ಬೆಂಗಳೂರಿನ ಹಲಸೂರುಗೇಟ್ ಪೊಲೀಸ್ ಠಾಣಾ ಸರಹದ್ದಿನ ನಗರತ್ ಪೇಟೆ ಮುಖ್ಯರಸ್ತೆಯಲ್ಲಿರುವ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಈ ಕಂಪನಿಯಲ್ಲಿ ಕಳೆದ ಆರು ತಿಂಗಳಿಂದ ಚಿನ್ನ ಮತ್ತು ಬೆಳ್ಳಿ ಕೆಲಸ ಮಾಡಿಕೊಂಡಿದ್ದ ಒಂಭತ್ತು ಜನ ಕೆಲಸಗಾರರು, ಇದ್ದಕ್ಕಿದ್ದಂತೆ ಕಂಪನಿಯಲ್ಲಿದ್ದ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕಂಪನಿಯು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಮಾಲೀಕರು ತಮಗೆ ಸರಿಯಾಗಿ ಸಂಬಳ ನೀಡದಿದ್ದಕ್ಕೆ ಮತ್ತು ಸುಲಭವಾಗಿ ಹಣ ಸಂಪಾದನೆ ಮಾಡುವ ದುರಾಸೆಯಿಂದ ಈ ಕಳವು ಮಾಡಿರುವುದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ, ಆರೋಪಿಗಳು ಬೆಂಗಳೂರಿನಿಂದ ವಿಶಾಖಪಟ್ಟಣಂ ಮೂಲಕ ಪಶ್ಚಿಮಬಂಗಾಳಕ್ಕೆ ರೈಲಿನಲ್ಲಿ ಪರಾರಿಯಾಗುತ್ತಿರುವ ಖಚಿತ ಮಾಹಿತಿ ಭಾತ್ಮೀದಾರರಿಂದ ಸಿಕ್ಕಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡವು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದ ರೈಲ್ವೆ ನಿಲ್ದಾಣದ ಬಳಿ ಒಂಭತ್ತು ಆರೋಪಿಗಳನ್ನು ಕದ್ದ ಮಾಲಿನ ಸಮೇತ ವಶಕ್ಕೆ ಪಡೆದರು. ಬಂಧಿತರಿಂದ 89 ಲಕ್ಷ ಮೌಲ್ಯದ ಒಟ್ಟು 618 ಗ್ರಾಂ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 2 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು, ಸಧ್ಯ ಮಾನ್ಯ ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಅಕ್ಷಯ ಎಂ ಹಾಕೆರವರ ಸಮರ್ಥ ಮಾರ್ಗದರ್ಶನದಲ್ಲಿ ಈ ಇಡೀ ಕಾರ್ಯಾಚರಣೆ ನಡೆಯಿತು. ಹಲಸೂರುಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಸುಧೀರ್ ಎಸ್ ರವರು ಈ ತನಿಖಾ ತಂಡದ ನೇತೃತ್ವವನ್ನು ವಹಿಸಿದ್ದರು. ಇವರ ನೇರ ಉಸ್ತುವಾರಿಯಲ್ಲಿ ಹಲಸೂರುಗೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶ್ರೀ. ಅಶ್ವತ್ಥನಾರಾಯಣಸ್ವಾಮಿ ಬಿಎನ್ ಮತ್ತು ಶ್ರೀ. ಶಿವಪ್ಪ ಮತ್ತು ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಅತ್ಯಂತ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿ ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್