Share News

ಮುಂಬಯಿ: ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್ ತಮ್ಮ ಪುತ್ರಿ ಲಾರಾ ಅವರ ಆರೋಗ್ಯದ ಕುರಿತು ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು DDH (ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, ಸದ್ಯ ಚಿಕಿತ್ಸೆಯ ನಂತರ ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಬೀ ಅ ಮ್ಯಾನ್’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ವರುಣ್, ಈ ಕಾಯಿಲೆಯ ಗಂಭೀರತೆಯನ್ನು ವಿವರಿಸಿದ್ದಾರೆ. “DDH ಎಂದರೆ ಸೊಂಟದ ಮೂಳೆ ಸರಿಯಾದ ಸ್ಥಾನದಿಂದ ಜಾರಿಕೊಳ್ಳುವುದು. ಇದರಿಂದ ಒಂದು ಕಾಲು ಉದ್ದ ಹಾಗೂ ಇನ್ನೊಂದು ಕಾಲು ಗಿಡ್ಡವಾಗಿ ನಡಿಗೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಮಗುವಿಗೆ ಸರಿಯಾಗಿ ನಡೆಯಲು ಅಥವಾ ಓಡಲು ಇದರಿಂದ ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

​ಈ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸದಿದ್ದರೆ ಮುಂದಿನ ದಿನಗಳಲ್ಲಿ ಅಕಾಲಿಕ ಆರ್ಥ್ರೈಟಿಸ್ (ಸಂದಿವಾತ) ಮತ್ತು ಸ್ಲಿಪ್ ಡಿಸ್ಕ್ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ನಟ ಆತಂಕ ವ್ಯಕ್ತಪಡಿಸಿದ್ದಾರೆ.

ಮಗಳ ಚಿಕಿತ್ಸಾ ಕ್ರಮದ ಬಗ್ಗೆ ಮಾಹಿತಿ ನೀಡಿದ ವರುಣ್, “ಅದೃಷ್ಟವಶಾತ್ ಅವಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳಲಿಲ್ಲ. ಒಂದು ವೈದ್ಯಕೀಯ ಪ್ರೊಸೀಜರ್ ಮೂಲಕ ಸೊಂಟದ ಮೂಳೆಯನ್ನು ಸರಿಯಾದ ಜಾಗಕ್ಕೆ ಕೂರಿಸಲಾಯಿತು. ಆದರೆ, ಸುಮಾರು ಎರಡುವರೆ ತಿಂಗಳುಗಳ ಕಾಲ ಮಗು ‘ಸ್ಪೈಕಾ ಕಾಸ್ಟ್’ (Spica Cast) ನಲ್ಲಿ ಇರಬೇಕಾಯಿತು. ಅರಿವಳಿಕೆ ನೀಡಿ ಕಾಸ್ಟ್ ಹಾಕುವ ಪ್ರಕ್ರಿಯೆ ನೋಡಲು ತುಂಬಾ ಕಷ್ಟಕರವಾಗಿತ್ತು. ಈಗ ಕಾಸ್ಟ್ ತೆಗೆಯಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ” ಎಂದಿದ್ದಾರೆ.

ತಮ್ಮ ಮಗಳ ಸ್ಥಿತಿಯ ಬಗ್ಗೆ ಯಾರು ಸಹಾನುಭೂತಿ ತೋರಿಸುವುದು ಬೇಡ ಎಂದು ವರುಣ್ ಧವನ್ ಸ್ಪಷ್ಟಪಡಿಸಿದ್ದಾರೆ. “ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿನಿಂದಲೇ ಈ ಕಾಯಿಲೆಗೆ ಉತ್ತಮ ತಪಾಸಣೆ ಮತ್ತು ಚಿಕಿತ್ಸೆ ಸಿಗುತ್ತದೆ. ಭಾರತದಲ್ಲಿಯೂ ಉತ್ತಮ ವೈದ್ಯರಿದ್ದಾರೆ. ಪೋಷಕರು ಈ ಬಗ್ಗೆ ಜಾಗೃತರಾಗಿರಬೇಕು ಎಂಬ ಉದ್ದೇಶದಿಂದ ಈ ವಿಷಯ ಹಂಚಿಕೊಳ್ಳುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.


Share News