ಬೆಂಗಳೂರು: ಪ್ರೇಯಸಿಯನ್ನು ಭೀಕರವಾಗಿ ಕೊಲೆ ಮಾಡಿ, ಮೃತದೇಹವನ್ನು ಕೆರೆಗೆ ಎಸೆದು ತಲೆಮರೆಸಿಕೊಂಡಿದ್ದ ಪಾಪಿ ಪ್ರಿಯಕರನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರತನ್ ದಾಸ್ (37) ಎಂದು ಗುರುತಿಸಲಾಗಿದ್ದು, ಅಸ್ಸಾಂ ಮೂಲದ ಅಂಜಲಿ ನಾಥ್ (47) ಹತ್ಯೆಯಾದ ದುರ್ದೈವಿ.
ಮೇ 8 ರಂದು ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಕೆರೆಯಲ್ಲಿ ಅಂಜಲಿ ನಾಥ್ ಎಂಬಾಕೆಯ ಶವ ತೇಲುತ್ತಿರುವುದು ಪತ್ತೆಯಾಗಿತ್ತು. ಮರುದಿನ ಮುಂಜಾನೆ ವಾಕಿಂಗ್ಗೆ ಹೋದ ಸಾರ್ವಜನಿಕರು ಶವವನ್ನು ನೋಡಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ್ದ ಹೆಬ್ಬಗೋಡಿ ಪೊಲೀಸರು, ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ಪೊಲೀಸ್ ತನಿಖೆಯ ವೇಳೆ ಆರೋಪಿ ರತನ್ ದಾಸ್ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಹತ್ಯೆಗೂ ಮುನ್ನ ಇಬ್ಬರ ನಡುವೆ ತೀವ್ರ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅಂಜಲಿ ನಾಥ್ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ರತನ್ ದಾಸ್ಗೆ ಒತ್ತಾಯಿಸುತ್ತಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಭುಗಿಲೆದ್ದ ಜಗಳ ವಿಕೋಪಕ್ಕೆ ತಿರುಗಿದೆ. ಆಕ್ರೋಶಗೊಂಡ ರತನ್ ದಾಸ್, ಅಂಜಲಿ ನಾಥ್ಳನ್ನು ಉಸಿರುಗಟ್ಟಿಸಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಶವವನ್ನು ತಿರುಪಾಳ್ಯ ಕೆರೆಗೆ ಎಸೆದು ಸ್ಥಳದಿಂದ ಕಾಲ್ಕಿತ್ತಿದ್ದ.
ಯಾವುದೇ ಸುಳಿವು ಬಿಡದೆ ಎಸ್ಕೇಪ್ ಆಗಿದ್ದ ಆರೋಪಿಯ ಪತ್ತೆಗಾಗಿ ಪೊಲೀಸರು ತಾಂತ್ರಿಕ ತನಿಖೆಯ ಮೊರೆ ಹೋಗಿದ್ದರು. ಮೃತರ ಮೊಬೈಲ್ ಕರೆಗಳ ವಿವರ (CDR) ಹಾಗೂ ಟವರ್ ಲೊಕೇಶನ್ (Tower Location) ಆಧರಿಸಿ ಹೆಬ್ಬಗೋಡಿ ಪೊಲೀಸರು ಜಾಲ ಬೀಸಿದ್ದರು. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಸದ್ಯ ಆರೋಪಿ ರತನ್ ದಾಸ್ನನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಬ್ಬಗೋಡಿ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.