Share News

​ಹನೂರು: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಕಾಡುಹಂದಿ ಬೇಟೆಯಾಡಲು ಯತ್ನಿಸುತ್ತಿದ್ದ ನಾಲ್ವರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

​ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಅನ್ವಿತ್ (26) ಬಂಧಿತ ಆರೋಪಿ. ಕಾರ್ಯಾಚರಣೆ ವೇಳೆ ಪರಾರಿಯಾಗಲು ಯತ್ನಿಸಿದಾಗ ಆತನ ಬಲಗಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಘಟನಾ ಸ್ಥಳದಿಂದ ಸೋಮವಾರಪೇಟೆ ತಾಲೂಕಿನ ದರ್ಶನ್, ಮಂಜ ಹಾಗೂ ಕಿರಣ್ ಎಂಬುವವರು ತಲೆಮರೆಸಿಕೊಂಡಿದ್ದಾರೆ.

​ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಡುಹಂದಿ ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಬಂಧಿತ ಮತ್ತು ಪರಾರಿಯಾದ ಆರೋಪಿಗಳಿಂದ ಎರಡು ಮೃತ ಕಾಡುಹಂದಿಗಳು, ಮಚ್ಚು, ಟಾರ್ಚ್‌ಗಳು, ಟಾರ್ಪಾಲಿನ್, ಮೊಬೈಲ್ ಫೋನ್‌ಗಳು ಹಾಗೂ ಬೇಟೆಗೆ ಬಳಸಿದ್ದ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

​ಆರ್.ಎಫ್.ಒ (RFO) ರವಿ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.


Share News