ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರ್ (ಟೆಕ್ಕಿ) ಅವರ ಮನೆಗೆ ಅಕ್ರಮವಾಗಿ ನುಗ್ಗಿ, ಏರ್ಗನ್ ತೋರಿಸಿ ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಶ್ರಫ್ ಹಾಗೂ ಅಪ್ಜಲ್ ಅಲಿಯಾಸ್ ಡಿಚ್ಚಿ ಎಂದು ಗುರುತಿಸಲಾಗಿದೆ.
ಜುಲೈ 6ರಂದು ಟೆಕ್ಕಿ ಅವರ ಮನೆಗೆ ನುಗ್ಗಿದ್ದ ಆರೋಪಿಗಳು, ಮನೆಯಲ್ಲಿದ್ದವರನ್ನು ಏರ್ಗನ್ ತೋರಿಸಿ ಬೆದರಿಸಿ ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ದರೋಡೆ ವೇಳೆಯಲ್ಲಿ ಮನೆಯಲ್ಲಿದ್ದ ಮಹಿಳೆಯ ಮೇಲೆಯೂ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ. ಈ ಕುರಿತು ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಕಳವು ಮಾಡಿದ್ದ ಚಿನ್ನಾಭರಣದ ಒಂದು ಭಾಗವನ್ನು ಈಗಾಗಲೇ ಮಾರಾಟ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಉಳಿದ ಚಿನ್ನಾಭರಣ ಹಾಗೂ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿ ಅಪ್ಜಲ್ ಈ ಹಿಂದೆ ಕೂಡ ಇಂತಹ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಳೆಯ ಅಪರಾಧಿಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
