ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ನಿಗಮಗಳ ಸಾರ್ವಜನಿಕ ಬಸ್ಸುಗಳ ಕಿಟಕಿಗಳಿಗೆ ಕಡ್ಡಾಯವಾಗಿ ಕಬ್ಬಿಣದ ಸರಳುಗಳನ್ನು (Iron Bars) ಅಳವಡಿಸಲು ಹಾಗೂ ಬಸ್ಸುಗಳಲ್ಲಿ ಗುಟ್ಕಾ, ತಂಬಾಕು ಸೇವನೆ ಮತ್ತು ಧೂಮಪಾನ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕ್ಕಿರೇಶ (17) ಎನ್ನುವ ಬಾಲಕ ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷೇಶ್ವರಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಭೀಕರ ದುರಂತ ಸಂಭವಿಸಿತ್ತು. ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಬಾಲಕನು ಗುಟ್ಕಾ ಉಗುಳಲು ಕಿಟಕಿಯಿಂದ ತಲೆಯನ್ನು ಹೊರಹಾಕಿದ್ದಾಗ, ಹಿಂಬದಿಯಿಂದ ಅತಿವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಆತನ ತಲೆಗೆ ಬಲವಾಗಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಯುವಕನ ಶಿರಚ್ಚೇದವಾಗಿ ದೇಹದಿಂದ ರುಂಡ ಬೇರ್ಪಟ್ಟು ರಸ್ತೆಗೆ ಬಿದ್ದಿದ್ದರೆ, ದೇಹವು ಬಸ್ಸಿನ ಕಿಟಕಿಯಲ್ಲೇ ನೇತಾಡುತ್ತಿತ್ತು. ಈ ಭೀಕರ ದೃಶ್ಯ ಪ್ರಯಾಣಿಕರಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಈ ಅಪಘಾತದ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಹೃದಯವಿದ್ರಾವಕ ಮತ್ತು ಭೀಕರ ಅಪಘಾತಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ತಡೆಯಲು ಮೋಹನ್ ಕುಮಾರ್ ದಾನಪ್ಪನವರು ಸಾರಿಗೆ ಇಲಾಖೆಗೆ ಈ ಕೆಳಕಂಡ ಪ್ರಮುಖ ಸೂಚನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಪತ್ರದ ಮೂಲಕ ಕೋರಿದ್ದಾರೆ:
ಕಬ್ಬಿಣದ ಸರಳುಗಳ ಅಳವಡಿಕೆ: ಪ್ರಯಾಣಿಕರು ಚಲಿಸುವ ಬಸ್ಸಿನ ಕಿಟಕಿಗಳಿಂದ ತಲೆ ಅಥವಾ ಕೈಗಳನ್ನು ಹೊರಹಾಕದಂತೆ ತಡೆಯಲು ರಾಜ್ಯದ ಎಲ್ಲಾ ನಿಗಮಗಳ ಬಸ್ಸುಗಳನ್ನು ಕೂಡಲೇ ಪರಿಶೀಲಿಸಿ, ಕಿಟಕಿಗಳಿಗೆ ಕಡ್ಡಾಯವಾಗಿ ಕಬ್ಬಿಣದ ಸರಳುಗಳನ್ನು ಅಳವಡಿಸಬೇಕು.
ಧೂಮಪಾನ ಹಾಗೂ ತಂಬಾಕು ನಿಷೇಧ: ಕೋಟ್ಪಾ ಕಾಯ್ದೆ-2003 (COTPA), ಕರ್ನಾಟಕ ಧೂಮಪಾನ ನಿಷೇಧ ಮತ್ತು ಧೂಮಪಾನ ಮಾಡದವರ ಆರೋಗ್ಯ ರಕ್ಷಣೆ ಅಧಿನಿಯಮ-2001 ಹಾಗೂ ತಂಬಾಕು ಉತ್ಪನ್ನಗಳ ನಿಷೇಧ (ತಿದ್ದುಪಡಿ) ಮಸೂದೆ 2024ರ ಅನ್ವಯ ಸಾರ್ವಜನಿಕ ಬಸ್ಸುಗಳಲ್ಲಿ ಗುಟ್ಕಾ, ತಂಬಾಕು ಮತ್ತು ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ಕಟ್ಟುನಿಟ್ಟಾಗಿ ನಿಷೇಧಿಸಬೇಕು.
1000 ರೂ. ದಂಡ ವಿಧಿಸಲು ಕ್ರಮ: ನಿಯಮ ಉಲ್ಲಂಘಿಸಿ ಬಸ್ಸುಗಳಲ್ಲಿ ತಂಬಾಕು ಹಾಗೂ ಧೂಮಪಾನ ಮಾಡುವ ಸಾರ್ವಜನಿಕ ಪ್ರಯಾಣಿಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು, 1,000 ರೂಪಾಯಿಗಳ ದಂಡ ವಿಧಿಸುವ ಪ್ರಕ್ರಿಯೆಯನ್ನು ಜಾರಿಗೆ ತರಬೇಕು.
ಸಾರ್ವಜನಿಕರ ಜೀವ ರಕ್ಷಣೆ ಮತ್ತು ಸುರಕ್ಷಿತ ಪ್ರಯಾಣದ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಯು ಈ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
