Share News

ಬನಶಂಕರಿ 6ನೇ ಹಂತದಲ್ಲಿ ವಾಸವಿದ್ದ ಪಿರ್ಯಾದುದಾರರು, ಬಿಇಎಂಎಲ್ ಲೇಔಟ್ 5ನೇ ಹಂತದಲ್ಲಿರುವ ತಮ್ಮ ಸ್ನೇಹಿತೆಯ ಮನೆಯ ಕೊಠಡಿಯೊಂದರಲ್ಲಿ ಕಳೆದ ಎಂಟು ವರ್ಷಗಳಿಂದ ವಾಸವಾಗಿದ್ದರು. 2024ರ ಜೂನ್‌ನಲ್ಲಿ ಬ್ಯಾಂಕ್ ಲಾಕರ್‌ನಿಂದ ತಂದಿದ್ದ ಚಿನ್ನಾಭರಣಗಳು ಹಾಗೂ 49.50 ಲಕ್ಷ ನಗದನ್ನು ಇವರು ಆ ಕೊಠಡಿಯ ಬೀರುವಿನಲ್ಲಿಟ್ಟು ಕೀಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

ಬಳಿಕ ಬೇರೊಂದು ಬ್ಯಾಂಕ್ ಲಾಕರ್‌ನಲ್ಲಿಡಲು ನೋಡಿದಾಗ ಕೀ ನಾಪತ್ತೆಯಾಗಿದ್ದು, ಕೀ ರಿಪೇರಿ ಮಾಡುವವನನ್ನು ಕರೆಸಿ ಬೀರು ತೆರೆದಾಗ ಅದಲ್ಲಿದ್ದ ನಗದು ಮತ್ತು ಚಿನ್ನಾಭರಣ ಮಾಯವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ನೇಹಿತೆ ಮತ್ತು ಆಕೆಯ ಪತಿಯನ್ನು ವಿಚಾರಿಸಿದಾಗ, ತಮಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಅದನ್ನು ಬಳಸಿಕೊಂಡಿರುವುದಾಗಿ ಹಾಗೂ ಒಡವೆಗಳನ್ನು ಅಡಮಾನ ಇಟ್ಟಿರುವುದಾಗಿ ತಿಳಿಸಿ, ವಾಪಸ್ ನೀಡಲು ನಿರಾಕರಿಸಿದ್ದಾರೆ.

ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ದಂಪತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅವರ ಸ್ನೇಹಿತನ ವಶದಲ್ಲಿದ್ದ 35 ಲಕ್ಷ ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಯತೀಶ್ ಎನ್ ರವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಯಿತು. ಬ್ಯಾಟರಾಯನಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಜಿ ವಿ ಉದಯಭಾಸ್ಕರ್ ರವರು ತನಿಖಾ ತಂಡದ ನೇತೃತ್ವವನ್ನು ವಹಿಸಿದ್ದರು. ಇನ್ನು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆದ ಶ್ರೀ. ಕುಮಾರಸ್ವಾಮಿ ಎನ್ ಅವರ ಸಿಬ್ಬಂದಿಗಳ ತಂಡವು ಅತ್ಯಂತ ಜಾಣ್ಮೆಯಿಂದ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

 


Share News