Share News

ಗದಗ: ಬಡತನದ ಕಾರಣಕ್ಕಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೈಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ಬಾಲಕಿಯೊಬ್ಬಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಪತ್ತೆಹಚ್ಚಿ, ಆಕೆಗೆ ಪರೀಕ್ಷೆ ಬರೆಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬರದೂರು ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ, ಮನೆಯಲ್ಲಿ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಕುಟುಂಬದ ಹೊರೆ ಹೊರಲು ನಿರ್ಧರಿಸಿದ ಬಾಲಕಿ, ವಿದ್ಯಾಭ್ಯಾಸಕ್ಕಿಂತ ಬದುಕು ಮುಖ್ಯವೆಂದು ಪರೀಕ್ಷೆಯನ್ನು ಅರ್ಧಕ್ಕೆ ಬಿಟ್ಟು ದ್ರಾಕ್ಷಿ ತೋಟವೊಂದಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಳು.

ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಗೈರು ಹಾಜರಾಗಿರುವ ವಿಷಯ ತಿಳಿದ ಮುಂಡರಗಿ ಕ್ಷೇತ್ರ ಶಿಕ್ಷಾಧಿಕಾರಿ (BEO) ಗಂಗಾಧರ ಅಣ್ಣಿಗೇರಿ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಬಾಲಕಿಯ ಪರಿಸ್ಥಿತಿಯನ್ನು ಅರಿತ ಅವರು, ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಆಕೆಗೆ ಧೈರ್ಯ ತುಂಬಿದರು. ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು, ಆಕೆಯನ್ನು ಮರಳಿ ಪರೀಕ್ಷಾ ಕೇಂದ್ರಕ್ಕೆ ಕರೆತರುವಲ್ಲಿ ಯಶಸ್ವಿಯಾದರು.

ಅಧಿಕಾರಿಗಳ ಮನವೊಲಿಕೆಯ ನಂತರ, ವಿದ್ಯಾರ್ಥಿನಿಯು ಮುಂಡರಗಿ ಪಟ್ಟಣದ ವಿ.ಜಿ. ಲಿಂಬಿಕಾಯಿ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಇಂದು ನಡೆದ ವಿಜ್ಞಾನ ವಿಷಯದ ಪರೀಕ್ಷೆಯನ್ನು ಬರೆದಿದ್ದಾಳೆ.

“ಬಡತನವು ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಮಗುವಿನ ಭವಿಷ್ಯ ರೂಪಿಸುವುದು ನಮ್ಮ ಕರ್ತವ್ಯ. ಆಕೆ ಪರೀಕ್ಷೆ ಬರೆದಿರುವುದು ನಮಗೆ ತೃಪ್ತಿ ತಂದಿದೆ,” ಎಂದು ಬಿಇಒ ಗಂಗಾಧರ ಅಣ್ಣಿಗೇರಿ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಈ ಸಮಯಪ್ರಜ್ಞೆ ಮತ್ತು ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಷ್ಟದ ಕಾಲದಲ್ಲಿ ವಿದ್ಯಾರ್ಥಿನಿಯ ನೆರವಿಗೆ ನಿಂತ ಅಧಿಕಾರಿಗಳ ಕಾರ್ಯ ಇತರರಿಗೆ ಮಾದರಿಯಾಗಿದೆ.


Share News