ಮೀನು ಸಾಗಿಸುವ ನೆಪದಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವೊಂದನ್ನು ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ಚಾಣಾಕ್ಷತನದಿಂದ ಮೀನಿನ ಟ್ರೇಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗೋವಾ-ಕರ್ನಾಟಕ ಗಡಿಭಾಗದ ಮಾಜಾಳಿ ತನಿಖಾ ಠಾಣೆ ಬಳಿ ಅಬಕಾರಿ ಸಿಬ್ಬಂದಿ ಹೊಂಚು ಹಾಕಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಗೋವಾದಿಂದ ಕಾರವಾರದ ಕಡೆಗೆ ಬರುತ್ತಿದ್ದ ಮಹೇಂದ್ರ ಬೊಲೆರೋ ಮ್ಯಾಕ್ಸ್ ಪಿಕಪ್ (ಫಿಶ್ ಕಂಟೇನರ್) ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಪ್ಲಾಸ್ಟಿಕ್ ಟ್ರೇಗಳ ಅಡಿಯಲ್ಲಿ ಅತ್ಯಂತ ಜಾಣ್ಮೆಯಿಂದ 13 ರಟ್ಟಿನ ಪೆಟ್ಟಿಗೆಗಳನ್ನು ಅಡಗಿಸಿಡಲಾಗಿತ್ತು. ಇವುಗಳಲ್ಲಿ 156 ಬಾಟಲಿಗಳಲ್ಲಿದ್ದ ಒಟ್ಟು 117 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಂದಾಜು 1,84,800 ರೂ. ಮೌಲ್ಯದ ಮದ್ಯ, 16,00,000 ರೂ. ಮೌಲ್ಯದ ಬೊಲೆರೋ ವಾಹನ ಹಾಗೂ 23,000 ರೂ. ಮೌಲ್ಯದ 46 ಪ್ಲಾಸ್ಟಿಕ್ ಟ್ರೇಗಳು ಸೇರಿದಂತೆ ಒಟ್ಟು 18,07,800 ರೂ. ಮೌಲ್ಯದ ಸೊತ್ತನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಕ್ರಮ ಸಾಗಾಟದ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ವಶಪಡಿಸಿಕೊಂಡ ಮುದ್ದೆಮಾಲುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾರವಾರದ ಅಬಕಾರಿ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ.
ಮೀನು ಸಾಗಿಸುವ ವಾಹನವನ್ನು ಬಳಸಿಕೊಂಡು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ ಸಾಗಾಟಗಾರರ ಸಂಚನ್ನು ವಿಫಲಗೊಳಿಸಿದ ಅಬಕಾರಿ ಇಲಾಖೆಯ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.