Share News

ಬೆಳಗಾವಿ: ನಗರದ ವಿವಿಧೆಡೆ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಖತರ್ನಾಕ್ ಕಳ್ಳರ ಜಾಲವನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 11 ಪ್ರಕರಣಗಳಿಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು 67 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಶುಕ್ರವಾರ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಈ ಕುರಿತು ಮಾಹಿತಿ ನೀಡಿದರು.

​ಬಂಧಿತರ ವಿವರ:

ಪೊಲೀಸರು ಕಳ್ಳತನ ಮಾಡುತ್ತಿದ್ದ ಮೂವರು ಹಾಗೂ ಕದ್ದ ಮಾಲನ್ನು ಖರೀದಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಕಳ್ಳತನ ಮಾಡುತ್ತಿದ್ದವರು: ರಿಹಾನ್ ದಪೇದಾರ, ಮಲ್ಲಿಕ ಹುಬ್ಬಳ್ಳಿ ಮತ್ತು ಅರಮಾನ ಶೇಖ.

​ಮಾಲು ಖರೀದಿಸುತ್ತಿದ್ದವರು: ಖಲೀಲ್ ಹುಬ್ಬಳ್ಳಿ ಹಾಗೂ ಶಾನವಾಜ ಪಠಾಣ್.

​ವಶಪಡಿಸಿಕೊಂಡ ಸ್ವತ್ತುಗಳು:

ಬಂಧಿತರಿಂದ 1 ಕೆಜಿ 300 ಗ್ರಾಂ ಬೆಳ್ಳಿ ಹಾಗೂ ಸುಮಾರು 415 ಗ್ರಾಂ ಬಂಗಾರದ ಆಭರಣಗಳು ಸೇರಿದಂತೆ ಒಟ್ಟು 67 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ನಗರದ ಹನುಮಾನ ನಗರ, ಉಜ್ವಲನಗರ ಹಾಗೂ ಅಜಮ ನಗರಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು. ಈ ಬಂಧನದಿಂದಾಗಿ ಮಾಳಮಾರುತಿ, ಎಪಿಎಂಸಿ ಮತ್ತು ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 11 ಪ್ರಕರಣಗಳು ಇತ್ಯರ್ಥಗೊಂಡಿವೆ.

ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ಸುಮಾರು 225 ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಯುಕ್ತರು ಕರೆ ನೀಡಿದರು. “ಜನರು ಪ್ರವಾಸಕ್ಕೆ ಅಥವಾ ಶುಭ ಸಮಾರಂಭಗಳಿಗಾಗಿ ಮನೆ ಬೀಗ ಹಾಕಿ ಹೊರಗೆ ಹೋಗುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹ ಮನೆಗಳ ಬಳಿ ಪೊಲೀಸರು ಹೆಚ್ಚಿನ ಗಸ್ತು ನಡೆಸಲು ಅನುಕೂಲವಾಗುತ್ತದೆ,” ಎಂದು ಅವರು ತಿಳಿಸಿದರು.

​ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿಸಿಪಿ ನಿರಂಜನ ರಾಜೆ ಅರಸ, ಎಸಿಪಿ ಸಂತೋಷ ಸತ್ಯನಾಯಕ, ಸಿಪಿಐ ಬಿ.ಆರ್. ಗಡ್ಡೇಕರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅಧಿಕಾರಿಗಳ ಈ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


Share News