Share News

ಮಣಿಪಾಲ: ಸುಶಿಕ್ಷಿತರ ನಾಡು, ಶೈಕ್ಷಣಿಕ ಕೇಂದ್ರ ಎಂದೇ ಖ್ಯಾತಿ ಪಡೆದಿರುವ ಉಡುಪಿಯ ಮಣಿಪಾಲದಲ್ಲಿ ಯುವಜೋಡಿಯೊಂದು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಡರಾತ್ರಿ ಮಣಿಪಾಲದ ಜನನಿಬಿಡ ರಸ್ತೆಯೊಂದರಲ್ಲಿ ಯುವಕ ಮತ್ತು ಯುವತಿಯೊಬ್ಬರು ಸಾರ್ವಜನಿಕ ಸ್ಥಳ ಎಂಬ ಪರಿಜ್ಞಾನವೇ ಇಲ್ಲದೆ ಪರಸ್ಪರ ಆಲಂಗಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರು. ವಿದೇಶಿ ಸಂಸ್ಕೃತಿಗೆ ಮಾರುಹೋಗಿರುವ ಇವರ ಈ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ದಾರಿಹೋಕರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ನಾಗರಿಕರೊಬ್ಬರು ಯುವಜೋಡಿಯ ಈ ವರ್ತನೆಯನ್ನು ಕಂಡು ಪ್ರಶ್ನಿಸಿ, ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡುವಂತೆ ಬುದ್ಧಿ ಹೇಳಿದ್ದಾರೆ. ಆದರೆ, ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಬದಲು ಆ ಯುವಕ ಪ್ರಶ್ನಿಸಿದವರ ಮೇಲೆಯೇ ಆಕ್ರೋಶಗೊಂಡು ಉದ್ಧಟತನ ಪ್ರದರ್ಶಿಸಿದ್ದಾನೆ. ಸ್ಥಳೀಯರು ಮತ್ತು ನಾಗರಿಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪರಿಸ್ಥಿತಿ ಅರಿತ ಜೋಡಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ವಿದ್ಯಾಕಾಶಿ” ಎಂದು ಕರೆಯಲ್ಪಡುವ ಮಣಿಪಾಲದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಸಂಸ್ಕೃತಿಯ ಅಧಃಪತನಕ್ಕೆ ಸಾಕ್ಷಿ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, “ಶಿಕ್ಷಣ ಪಡೆಯಲು ಬರುವವರು ಇಂತಹ ಅಸಭ್ಯ ಕೆಲಸಗಳಲ್ಲಿ ತೊಡಗುವುದು ದುರದೃಷ್ಟಕರ” ಎಂದು ಕಮೆಂಟ್ ಮಾಡುತ್ತಿದ್ದಾರೆ.

​ಶೈಕ್ಷಣಿಕ ಕೇಂದ್ರದ ಘನತೆಗೆ ಧಕ್ಕೆ ತರುವ ಇಂತಹ ಕೃತ್ಯಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.


Share News