ಡಿಜಿಪಿ ಅವರಿಗೆ ಪತ್ರ: ಮೂಲಸೌಕರ್ಯ ಹಾಗೂ ಪಾನೀಯ ಒದಗಿಸಲು ಮನವಿ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಹಾಗೂ ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ, ರಸ್ತೆಯಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸ್ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದಾರೆ.
ರಾಜ್ಯದ ಇತರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆಯ ಕೆಲಸ ಅತ್ಯಂತ ಸವಾಲಿನದ್ದಾಗಿದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಪೈಪ್‌ಲೈನ್ ಅಳವಡಿಕೆ ಹಾಗೂ ವಾಹನಗಳ ದಟ್ಟಣೆಯಿಂದಾಗಿ ವಿಪರೀತ ಧೂಳು ಮತ್ತು ವಾಯುಮಾಲಿನ್ಯ ಉಂಟಾಗಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಂಚಾರ ಪೊಲೀಸರು ನೆರಳಿಲ್ಲದೆ, ಧೂಳಿನ ನಡುವೆಯೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿದ್ದಾರೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಸಿಬ್ಬಂದಿಗಳ ದೈಹಿಕ ಆರೋಗ್ಯ ಕಾಪಾಡಲು ಈ ಕೆಳಗಿನ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ:
ನೆರಳಿನ ವ್ಯವಸ್ಥೆ: ಸಂಚಾರ ಸಿಗ್ನಲ್‌ಗಳಲ್ಲಿ ಮತ್ತು ಕರ್ತವ್ಯದ ಸ್ಥಳಗಳಲ್ಲಿ ತಕ್ಷಣವೇ ಗುಣಮಟ್ಟದ ಪ್ಯಾರಾಚೂಟ್ ಕೊಡೆಗಳನ್ನು (Umbrellas) ಅಳವಡಿಸುವುದು.
ಆರೋಗ್ಯ ಸುರಕ್ಷತೆ: ವಾಯುಮಾಲಿನ್ಯ ಮತ್ತು ಧೂಳಿನಿಂದ ರಕ್ಷಣೆ ಪಡೆಯಲು ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಮಾಸ್ಕ್‌ಗಳನ್ನು ಒದಗಿಸುವುದು.
ಪಾನೀಯ ವ್ಯವಸ್ಥೆ: ಬೇಸಿಗೆಯ ಅವಧಿಯಲ್ಲಿ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯಲು ನಿರಂತರ ಕುಡಿಯುವ ನೀರು ಹಾಗೂ ಎಲೆಕ್ಟ್ರೋಲೈಟ್ ಪಾನೀಯಗಳನ್ನು (Electrolyte Drinks) ಪೂರೈಸುವುದು.
ಈಗಾಗಲೇ ಉತ್ತರ ಕರ್ನಾಟಕದ ಕೆಲವು ವಲಯಗಳಲ್ಲಿ ಕಚೇರಿ ವೇಳೆಯನ್ನು ಬದಲಾಯಿಸಿರುವ ಮಾದರಿಯನ್ನು ಉಲ್ಲೇಖಿಸಿರುವ ಅವರು, ಸಂಚಾರ ಪೊಲೀಸರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆರೋಗ್ಯದ ದೃಷ್ಟಿಯಿಂದ ಗಂಭೀರ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಬಿಸಿಲಿನ ತಾಪಕ್ಕೆ ತತ್ತರಿಸುತ್ತಿರುವ ಸಿಬ್ಬಂದಿಗಳ ಸ್ಥಿತಿಯನ್ನು ಕಂಡು ಸಾರ್ವಜನಿಕರೂ ಮರುಗುತ್ತಿದ್ದು, ಇಲಾಖೆಯು ಶೀಘ್ರವೇ ಸ್ಪಂದಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
