ಕನಕಪುರ: “ಆಶ್ರಯ ಯೋಜನೆಯಡಿ ಕನಕಪುರ ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಂಚಿಕೆ ಮಾಡಬೇಕು. ಈಗಾಗಲೇ ನಿವೇಶನ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಿ,” ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸೋಮವಾರ ಕನಕಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನಿವೇಶನ ಇಲ್ಲದವರಿಗೆ ಆದ್ಯತೆ ನೀಡಬೇಕು. ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಹಂಚಿಕೆ ಪ್ರಕ್ರಿಯೆ ನಡೆಸಬೇಕು. ಒಂದು ವೇಳೆ ಎರಡು ನಿವೇಶನ ಹೊಂದಿರುವವರು ಅರ್ಜಿ ಸಲ್ಲಿಸಿದ್ದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಅವರಿಗೆ ವಾಸ್ತವ ತಿಳಿಸಿ ಹೇಳಬೇಕು ಎಂದು ತಹಶೀಲ್ದಾರ್ ಸಂಜಯ್ ಅವರಿಗೆ ಸೂಚಿಸಿದರು.
ಸಭೆಗೆ ಮಾಹಿತಿ ನೀಡಿದ ತಹಶೀಲ್ದಾರ್ ಸಂಜಯ್, “ತಾಲೂಕಿನಲ್ಲಿ ಆಶ್ರಯ ಯೋಜನೆಗಾಗಿ 272 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಈಗಾಗಲೇ 2,860 ನಿವೇಶನಗಳನ್ನು ರಚಿಸಲಾಗಿದ್ದು, 1,852 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಉಳಿದ 621 ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದರು.
ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಪಡೆದು, ಸ್ಥಳೀಯ ವಿಳಾಸದಲ್ಲಿ ವಾಸವಿರದೆ ಸರ್ಕಾರಕ್ಕೆ ವಂಚಿಸುವವರನ್ನು ಪತ್ತೆ ಹಚ್ಚಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಮನೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ಡಿಸಿಎಂ ಸೂಚಿಸಿದರು. ಶೀಘ್ರದಲ್ಲೇ ಕನಕಪುರದಲ್ಲಿ ‘ಪಂಚ ಗ್ಯಾರಂಟಿ’ಗಳ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ: ಕೆಪಿಎಸ್ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಮತ್ತು ಸೌಲಭ್ಯಗಳ ಬಗ್ಗೆ ವಿಡಿಯೋ ಚಿತ್ರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಜಿಲ್ಲಾ ಕೆಡಿಪಿ ಸದಸ್ಯರು ಕಾಲಕಾಲಕ್ಕೆ ತಪಾಸಣೆ ನಡೆಸಬೇಕು.
ಕುಡಿಯುವ ನೀರು: ತಾಲೂಕಿನ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಪಡಿಸಿ ಜನರಿಗೆ ನೀರು ಒದಗಿಸಬೇಕು. ಹಣದ ಅಭಾವವಿದ್ದರೆ ಸರ್ಕಾರ ಭರಿಸಲಿದೆ.
ಸಮಾಜ ಕಲ್ಯಾಣ: ಕನಕಪುರದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅಗತ್ಯವಿರುವ ಪ್ರಸ್ತಾವನೆಯನ್ನು ತಕ್ಷಣವೇ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಜಲ ಮಂಡಳಿ: ಕನಕಪುರ ನಗರಸಭೆಯಿಂದ ಬೆಂಗಳೂರು ಜಲ ಮಂಡಳಿಗೆ ಪಾವತಿಸಬೇಕಿದ್ದ ₹14.5 ಕೋಟಿ ಬಾಕಿ ಹಣವನ್ನು ಸರ್ಕಾರ ಮನ್ನಾ ಮಾಡಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿಇಒ ಅನ್ಮೋಲ್ ಜೈನ್, ಎಸ್ಪಿ ಶ್ರೀನಿವಾಸ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.
ವರದಿ :- ಗಿಲ್ಬರ್ಟ್. ಜೆ