ಪುಣೆ, ಜೂನ್ 10: ಪೊಲೀಸ್ ಸಬ್-ಇನ್‌ಸ್ಪೆಕ್ಟರ್ (PSI) ಎಂದು ಹೇಳಿಕೊಂಡು ಓಡಾಡುತ್ತಿದ್ದ 25 ವರ್ಷದ ಮಹಿಳೆಯನ್ನು ಪುಣೆ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಆಕೆ ಯಾವುದೇ ಪೊಲೀಸ್ ಅಧಿಕಾರಿ ಅಲ್ಲದೇ, ಖಾಸಗಿ ಕಂಪನಿಯ ಉದ್ಯೋಗಿಯಾಗಿರುವುದು ಪತ್ತೆಯಾಗಿದೆ.
ಬಂಧಿತೆಯನ್ನು ಸಮೀನಾ ಆಸಿಫ್ ಇನಾಮ್ದಾರ್ ಅಲಿಯಾಸ್ ಸಮೀನಾ ಅಯೂಬ್ ಪಠಾಣ್ (25) ಎಂದು ಗುರುತಿಸಲಾಗಿದೆ. ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸು ಹೊಂದಿದ್ದ ಸಮೀನಾ, ಅದು ಸಾಧ್ಯವಾಗದ ಹಿನ್ನೆಲೆ ನಕಲಿ ಪೊಲೀಸ್ ಅಧಿಕಾರಿಯ ವೇಷ ಧರಿಸಿ ಜನರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಯೂನಿಫಾರ್ಮ್ ಧರಿಸಿ ವಿಐಪಿ ಸೌಲಭ್ಯ ಪಡೆಯಲು ಯತ್ನ
ಪೊಲೀಸರ ಮಾಹಿತಿ ಪ್ರಕಾರ, ಸಮೀನಾ PSI ಯೂನಿಫಾರ್ಮ್‌ಗೆ ಹೋಲುವ ಉಡುಪನ್ನು ವಿಶೇಷವಾಗಿ ಹೊಲಿಸಿಕೊಂಡು, ಅದಕ್ಕೆ ಹುದ್ದೆ ಸೂಚಿಸುವ ಸ್ಟಾರ್‌ಗಳನ್ನು ಅಳವಡಿಸಿಕೊಂಡಿದ್ದಳು. ಇದೇ ಯೂನಿಫಾರ್ಮ್ ಧರಿಸಿ ಪುಣೆಯ ಕ್ಯಾಂಪ್ ಪ್ರದೇಶದಲ್ಲಿರುವ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದಳು.
ಅಲ್ಲಿ ಪೊಲೀಸ್ ಅಧಿಕಾರಿಯಂತೆ ವರ್ತಿಸಿ ಸಿಬ್ಬಂದಿಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಳು. ಸಾಲಿನಲ್ಲಿ ಕಾಯದೇ ವೈದ್ಯರನ್ನು ಶೀಘ್ರವಾಗಿ ಭೇಟಿ ಮಾಡಲು ಈ ನಕಲಿ ಗುರುತನ್ನು ಬಳಸಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕ್ಲಿನಿಕ್ ಸಮೀಪ ಸಮೀನಾ ತನ್ನನ್ನು ಪೊಲೀಸ್ ಅಧಿಕಾರಿಯಂತೆ ಪರಿಚಯಿಸಿಕೊಳ್ಳುತ್ತಿದ್ದ ವೇಳೆ ಗಸ್ತಿನಲ್ಲಿದ್ದ ನಿಜವಾದ PSI ಅವರ ಗಮನಕ್ಕೆ ಬಂದಳು. ಆಕೆಯ ವರ್ತನೆ ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಅವರು ಪೋಸ್ಟಿಂಗ್ ಸ್ಥಳ ಹಾಗೂ ಅಧಿಕೃತ ಗುರುತಿನ ಚೀಟಿ ಬಗ್ಗೆ ಪ್ರಶ್ನಿಸಿದರು.
ಆದರೆ ಸಮೀನಾ ಸಮರ್ಪಕ ಉತ್ತರ ನೀಡಲು ವಿಫಲಳಾದಳು. ಇದರಿಂದ ಅನುಮಾನ ದೃಢಗೊಂಡು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಕಲಿ ಪೊಲೀಸ್ ಅಧಿಕಾರಿಯ ನಾಟಕ ಬಯಲಾಗಿದೆ.
ಈ ಸಂಬಂಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮೀನಾಳನ್ನು ಬಂಧಿಸಿದ್ದಾರೆ. ಈ ಹಿಂದೆ ಕೂಡ ಆಕೆ ನಕಲಿ ಪೊಲೀಸ್ ಗುರುತನ್ನು ಬಳಸಿ ಯಾರನ್ನಾದರೂ ಮೋಸಗೊಳಿಸಿದ್ದಾಳೆಯೇ ಅಥವಾ ವೈಯಕ್ತಿಕ ಲಾಭಕ್ಕಾಗಿ ಬಳಸಿದ್ದಾಳೆಯೇ ಎಂಬ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರನ್ನು ದಾರಿತಪ್ಪಿಸುವ ಯಾವುದೇ ಪ್ರಯತ್ನ ಕಾನೂನುಬದ್ಧವಾಗಿ ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ವರದಿ :- ಗಿಲ್ಬರ್ಟ್. ಜೆ