Share News

ಕೋಲಾರ: ಚಿನ್ನದ ಆಭರಣಗಳನ್ನು ಪಾಲಿಶ್ ಮಾಡುವ ಸೋಗಿನಲ್ಲಿ ವಂಚಿಸಿ, 25 ಗ್ರಾಂ ಚಿನ್ನದ ಸರದಲ್ಲಿದ್ದ 8 ಗ್ರಾಂ ಚಿನ್ನವನ್ನು ಕಳುವು ಮಾಡಿದ್ದ ಆರೋಪಿಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 1.20 ಲಕ್ಷ ರೂ. ಮೌಲ್ಯದ 8 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

​ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಲ್ದೇಪಲ್ಲಿ ಗ್ರಾಮದಲ್ಲಿ ಅಕ್ಟೋಬರ್ 20ರ ಬೆಳಿಗ್ಗೆ ಈ ಘಟನೆ ನಡೆದಿತ್ತು. ಗ್ರಾಮದ ಪಲ್ಲವಿ ಕೆ.ವಿ. ಎಂಬುವವರೇ ಈ ವಂಚನೆಗೆ ಒಳಗಾದವರು. ಮುಕೇಶ್ ಕುಮಾರ್ (25) ಬಂಧಿತ ಆರೋಪಿ.

​ಘಟನೆಯ ವಿವರ:

​ಅಕ್ಟೋಬರ್ 20 ರ ಬೆಳಿಗ್ಗೆ 9:30ರ ಸುಮಾರಿಗೆ ಮಲ್ದೇಪಲ್ಲಿ ಗ್ರಾಮದಲ್ಲಿ ಬಂಗಾರದ ಒಡವೆಗಳನ್ನು ಪಾಲಿಶ್ ಮಾಡುವ ಪೌಡರ್ ಮಾರಾಟ ಮಾಡುವುದಾಗಿ ಹೇಳುತ್ತಾ ಇಬ್ಬರು ವ್ಯಕ್ತಿಗಳು ಬಂದಿದ್ದರು. ಇದನ್ನು ಗಮನಿಸಿದ ದೂರುದಾರರಾದ ಪಲ್ಲವಿ ಅವರು ತಮ್ಮ ಮನೆಯ ಬಳಿ ಅವರನ್ನು ಕರೆಸಿಕೊಂಡಿದ್ದಾರೆ.

​ಪೌಡರ್ ಬೆಲೆ ಕೇವಲ 60 ರೂ. ಎಂದು ಹೇಳಿದ ಆರೋಪಿಗಳು, ಕಣ್ಣುಮುಂದೆಯೇ ಆಭರಣ ಪಾಲಿಶ್ ಮಾಡಿ ಕೊಡುವುದಾಗಿ ನಂಬಿಸಿದ್ದಾರೆ. ಅವರ ಮಾತನ್ನು ನಂಬಿ ಪಲ್ಲವಿ ಅವರು 25 ಗ್ರಾಂ ತೂಕದ ಚಿನ್ನದ ಸರವನ್ನು ಪಾಲಿಶ್ ಮಾಡಲು ನೀಡಿದ್ದಾರೆ. ಆಗ ಆರೋಪಿಗಳು ಸರವನ್ನು ರಾಸಾಯನಿಕ (ಪೌಡರ್) ಬೆರೆಸಿದ ನೀರಿನಲ್ಲಿ ಅದ್ದಿ, ಪೇಪರ್‌ನಲ್ಲಿ ಸುತ್ತಿ ಕೊಟ್ಟು ಸ್ವಲ್ಪ ಸಮಯದ ನಂತರ ಬಟ್ಟೆಯಿಂದ ಒರೆಸಿಕೊಳ್ಳುವಂತೆ ಹೇಳಿ ಪರಾರಿಯಾಗಿದ್ದಾರೆ. ಬಳಿಕ ಅನುಮಾನಗೊಂಡು ಸರವನ್ನು ಪರಿಶೀಲಿಸಿದಾಗ, ಸರದಲ್ಲಿದ್ದ 8 ಗ್ರಾಂ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

​ಪೊಲೀಸರ ಕಾರ್ಯಾಚರಣೆ ಮತ್ತು ಬಂಧನ:

​ಈ ಕುರಿತು ಸಂತ್ರಂತೆ ಪಲ್ಲವಿಯವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶ್ರೀನಿವಾಸಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಿ. ಶಂಕರಚಾರ್, ಪಿ.ಎಸ್.ಐ ಜಯರಾಮ್, ಎ.ಎಸ್.ಐ ವಾಸುದೇವ ಮೂರ್ತಿ ಹಾಗೂ ಸಿಬ್ಬಂದಿಗಳಾದ ನಾಗರಾಜ್, ಆನಂದಕುಮಾರ್, ಅಂಬರೀಶ್ ಮತ್ತು ಸಂತೋಷ್ ಅವರನ್ನೊಳಗೊಂಡ ವಿಶೇಷ ತಂಡ ಆರೋಪಿಗಾಗಿ ಬಲೆ ಬೀಸಿತ್ತು.

​ಕೊರ್ನಹಳ್ಳಿ, ಸೋಮಯಾಜಲಹಳ್ಳಿ, ಮಲ್ಲೇಪಲ್ಲಿ ಸೇರಿದಂತೆ ವಿವಿಧಡೆ ತೀವ್ರ ಗಸ್ತು ತಿರುಗಿದ ಪೊಲೀಸರ ತಂಡ, ಸುಮಾರು 150ಕ್ಕೂ ಹೆಚ್ಚು ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿ ಮುಕೇಶ್ ಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

​ಪೊಲೀಸ್ ಸಿಬ್ಬಂದಿಗೆ ಶ್ಲಾಘನೆ:

​ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ ಹಾಗೂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡದ ಕಾರ್ಯಕ್ಷಮತೆಯನ್ನು ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕನ್ನಿಕಾ ಸಿಕ್ರಿವಾಲ್ ಪ್ರಶಂಸಿ, ಶ್ಲಾಘಿಸಿದ್ದಾರೆ.

 


Share News