Share News

​ಗುತ್ತಲ : ಸರ್ಕಾರದ ಯಾವುದೇ ಪರವಾನಗಿ ಅಥವಾ ಪಾಸ್‌ ಇಲ್ಲದೆ ಅಕ್ರಮವಾಗಿ ತುಂಗಭದ್ರಾ ನದಿ ಪಾತ್ರದಿಂದ ಬೃಹತ್ ಪ್ರಮಾಣದಲ್ಲಿ ಮರಳನ್ನು ಎಗರಿಸಿಕೊಂಡು ಹೋಗಿರುವ ಗಂಭೀರ ಘಟನೆ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯ ಗಳಗನಾಥ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

​ಗುತ್ತಲ ಪೊಲೀಸ್ ಠಾಣೆಯ ಪ್ರಭಾರ ಪಿಎಸ್‌ಐ ಪರಶುರಾಮ ಎನ್. ಲಮಾಣಿ ಮತ್ತು ಸಿಬ್ಬಂದಿ ಅಕ್ಟೋಬರ್ 26ರ ಸಾಯಂಕಾಲ 5:00 ಗಂಟೆಯ ಸುಮಾರಿಗೆ ಹುರಳಿಹಾಳ ಹಾಗೂ ಗಳಗನಾಥ ಗ್ರಾಮಗಳ ಕಡೆಗೆ ಗಸ್ತು (ಪೆಟ್ರೋಲಿಂಗ್) ನಡೆಸುತ್ತಿದ್ದರು. ಈ ವೇಳೆ ಅವರ ಮೊಬೈಲ್ ಫೋನ್‌ಗೆ ಬಂದ ದೃಶ್ಯಾವಳಿ (ವೀಡಿಯೊ) ಒಂದರಲ್ಲಿ, ಗಳಗನಾಥ ಗ್ರಾಮದ ಶ್ರೀ ಗಳಗನಾಥೇಶ್ವರ ದೇವಸ್ಥಾನದ ಬಳಿ ತುಂಗಭದ್ರಾ ನದಿ ದಂಡೆಯಲ್ಲಿ ಅಪರಿಚಿತ ವ್ಯಕ್ತಿಗಳು ಅಕ್ರಮ ಕಾರ್ಯಾಚರಣೆ ನಡೆಸುವುದು ಕಂಡುಬಂದಿದೆ.

​ಎರಡು ಹಳದಿ ಬಣ್ಣದ ಜೆಸಿಬಿ ಯಂತ್ರಗಳು ಹಾಗೂ ಎರಡು ಟ್ರ್ಯಾಕ್ಟರ್‌ಗಳನ್ನು (ಒಂದು ನೀಲಿ ಹಾಗೂ ಒಂದು ಕೆಂಪು ಬಣ್ಣದ್ದು) ಬಳಸಿಕೊಂಡು ನದಿಯಿಂದ ಭಾರಿ ಪ್ರಮಾಣದಲ್ಲಿ ಮರಳು ಎತ್ತಿ ಕಳ್ಳತನ ಮಾಡುತ್ತಿರುವುದು ವೀಡಿಯೊದಲ್ಲಿ ಪತ್ತೆಯಾಗಿದೆ.

​ಆರೋಪಿಗಳು ಯಾವುದೇ ಕಾನೂನುಬದ್ಧ ದಾಖಲೆ ಅಥವಾ ಅನುಮತಿ ಇಲ್ಲದೆ ನದಿ ಪಾತ್ರದಿಂದ ಸುಮಾರು ₹20,000 ಮೌಲ್ಯದ 30 ಮೆಟ್ರಿಕ್ ಟನ್ ಕಲ್ಲು ಮಿಶ್ರಿತ ಮರಳನ್ನು ಕಳ್ಳತನದಿಂದ ತೆಗೆದು ಸಂಗ್ರಹಿಸಿ ಸಾಗಿಸಿದ್ದಾರೆ. ಈ ಕುರಿತು ಪ್ರಭಾರ ಪಿಎಸ್‌ಐ ಪರಶುರಾಮ ಲಮಾಣಿ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ಆರೋಪಿಗಳ ವಿರುದ್ಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮರಳು ಮಾಫಿಯಾ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.


Share News