Share News

ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಬಿಕ್ಕೊಳತ್ತೂರು ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

​ದಿನಾಂಕ 24-10-2026 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಶನಿವಾರಸಂತೆ ಪೊಲೀಸರು ಬಿಕ್ಕೊಳತ್ತೂರು ಬಸ್ ನಿಲ್ದಾಣದ ಬಳಿ ದಿಢೀರ್ ದಾಳಿ ನಡೆಸಿದರು. ಈ ವೇಳೆ ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಬ್ಯಾಗ್‌ನಲ್ಲಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಸಾಗಿಸುತ್ತಿದ್ದುದು ಕಂಡುಬಂದಿದೆ.

​ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಆತನ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತದನಂತರ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

​ಇದೇ ವೇಳೆ ಸಾರ್ವಜನಿಕರು ಹಾಗೂ ಯುವಜನತೆಗೆ ಜಾಗೃತಿ ಸಂದೇಶ ನೀಡಿರುವ ಪೊಲೀಸರು, “ಕ್ಷಣಿಕ ಮೋಜಿಗಾಗಿ ಮಾದಕ ವಸ್ತುಗಳಿಗೆ ಬಲಿಯಾಗಬೇಡಿ. ಮಾದಕ ದ್ರವ್ಯಗಳಿಂದ ದೂರವಿದ್ದು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ” ಎಂದು ಮನವಿ ಮಾಡಿದ್ದಾರೆ.


Share News