ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ನಿವೇಶನಗಳನ್ನು ತ್ಯಾಜ್ಯ ಸುರಿಯುವ ಸ್ಥಳಗಳನ್ನಾಗಿ ಬಳಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ. ಆಗಸ್ಟ್ ತಿಂಗಳಿನಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಲಿದ್ದು, ಖಾಲಿ ಜಾಗಗಳನ್ನು ಸ್ವಚ್ಛಗೊಳಿಸದ ಮಾಲೀಕರಿಗೆ ಗರಿಷ್ಠ ₹1 ಲಕ್ಷದವರೆಗೆ ದಂಡ ವಿಧಿಸಲು ನಿರ್ಧರಿಸಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರ ಸೂಚನೆಯಂತೆ ನಗರದ ಬ್ಲಾಕ್ ಸ್ಪಾಟ್‌ಗಳು, ಕಟ್ಟಡ ತ್ಯಾಜ್ಯ, ಮರದ ಕೊಂಬೆ ಹಾಗೂ ರಸ್ತೆಬದಿ ಬಿದ್ದಿರುವ ವಿದ್ಯುತ್ ಕಂಬ, ಪೈಪ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಳ್ಳಲಿದೆ.
ಆಗಸ್ಟ್ 15ರ ಗಡುವು:
ನಗರದ ಖಾಲಿ ನಿವೇಶನ ಮಾಲೀಕರಿಗೆ ಆಗಸ್ಟ್ 15ರವರೆಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ನಿವೇಶನ ಸ್ವಚ್ಛಗೊಳಿಸದಿದ್ದರೆ ಪಾಲಿಕೆಯೇ ತ್ಯಾಜ್ಯ ತೆರವುಗೊಳಿಸಿ, ಆ ವೆಚ್ಚವನ್ನು ಮಾಲೀಕರಿಂದಲೇ ವಸೂಲಿ ಮಾಡಲಿದೆ.
ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024ರ ಅಡಿಯಲ್ಲಿ ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ. ಇದನ್ನು ಪಾವತಿಸದಿದ್ದರೆ ‘ಕರ್ನಾಟಕ ಭೂಕಂದಾಯ ಕಾಯ್ದೆ-1964’ರಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ದಂಡದ ಪ್ರಮಾಣ:
ಮೊದಲ ಬಾರಿಯ ಉಲ್ಲಂಘನೆ: ₹25,000 ದಂಡ.
ಪುನರಾವರ್ತಿತ ಉಲ್ಲಂಘನೆ: ₹50,000 ರಿಂದ ₹1,00,000 ವರೆಗೆ ದಂಡ.
ಮಾಲೀಕರು ತಮ್ಮ ಖಾಲಿ ನಿವೇಶನ ಸ್ವಚ್ಛಗೊಳಿಸಿದ ಬಳಿಕ ಮತ್ತೆ ಕಸ ಬೀಳದಂತೆ ಕಾಂಪೌಂಡ್ ಅಥವಾ ಬೇಲಿ ನಿರ್ಮಿಸುವುದು ಕಡ್ಡಾಯವಾಗಿದೆ.
ಸಾರ್ವಜನಿಕರೂ ದೂರು ನೀಡಬಹುದು:
ಆಗಸ್ಟ್ 15ರ ನಂತರವೂ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಕಂಡುಬಂದರೆ, ಸಾರ್ವಜನಿಕರು ಆ ಸ್ಥಳದ ಫೋಟೋ ಹಾಗೂ ಜಿಪಿಎಸ್ (GPS) ಸ್ಥಳದ ಮಾಹಿತಿಯೊಂದಿಗೆ 9448197197 ವಾಟ್ಸ್‌ಆಪ್ ಸಂಖ್ಯೆಗೆ ದೂರು ಕಳುಹಿಸಬಹುದು. ದೂರುದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.