Share News

ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೃಹತ್ ಮನೆ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸ್ಟೇಷನ್ ರಸ್ತೆಯಲ್ಲಿ ವಾಸವಾಗಿರುವ ಹಿರಿಯ ನಾಗರಿಕರೊಬ್ಬರು ತಮ್ಮ ಮನೆಯ ಬೀರುವಿನಲ್ಲಿದ್ದ ಸುಮಾರು 01 ಕೆಜಿ 200 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ಏಪ್ರಿಲ್ 15ರಂದು ದೂರು ನೀಡಿದ್ದರು. ದೂರಿನಲ್ಲಿ ತಮ್ಮ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದ ಸಂಬಂಧಿಕರೇ ಈ ಕೃತ್ಯ ಎಸಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಏಪ್ರಿಲ್ 16ರಂದು ಗೋವಿಂದಪುರದ ಬಳಿ ದೂರುದಾರರ ಸಂಬಂಧಿಕನೋರ್ವನನ್ನು ವಶಕ್ಕೆ ಪಡೆದರು. ಆತನ ವಿಚಾರಣೆಯಿಂದ ಮತ್ತೋರ್ವ ಸಹಚರನ ಭಾಗವಹಿಸುವಿಕೆ ಬೆಳಕಿಗೆ ಬಂದಿದ್ದು, ನಂತರ ಆತನನ್ನೂ ಮತ್ತಿಕೆರೆಯಲ್ಲಿ ಬಂಧಿಸಲಾಯಿತು. ಬಂಧಿತರು ನೀಡಿದ ಮಾಹಿತಿಯ ಮೇರೆಗೆ ಮತ್ತಿಕೆರೆಯ ಜ್ಯೂವೆಲ್ಲರಿ ಅಂಗಡಿಯಿಂದ 1,13,00,000ರೂ. ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ನ್ಯಾಯಾಲಯವು ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಪ್ರಕರಣದ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ವಿಕ್ರಮ ಅಮಟೆರವರ ಮಾರ್ಗದರ್ಶನದಲ್ಲಿ ಈ ತನಿಖೆ ನಡೆಯಿತು. ಪುಲಕೇಶಿನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಸಿಆರ್ ಗೀತಾ ರವರು ತಂಡದ ನೇತೃತ್ವ ವಹಿಸಿದ್ದರು. ಇವರೊಂದಿಗೆ ಶಿವಾಜಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆದ ಶ್ರೀ. ಡಿಸಿ ಮಂಜು ಮತ್ತು ಇತರ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡವು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News