ಬಾಳೆಹೊನ್ನೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಅವರ ನಿವಾಸದ ಮುಂದೆಯೇ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಎಸಿಎಫ್ ಮೋಹನ್ ಅವರ ಮನೆ ಮುಂದೆ ಈ ಕೃತ್ಯ ನಡೆದಿದ್ದು, ಇಲಾಖೆಯ ಸಿಬ್ಬಂದಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಎಸಿಎಫ್ ಮೋಹನ್ ಹಾಗೂ ಅವರ ಜೀಪ್ ಚಾಲಕನನ್ನು ಗುರಿಯಾಗಿಸಿಕೊಂಡು ಈ ವಾಮಾಚಾರ ನಡೆಸಲಾಗಿದೆ ಎನ್ನಲಾಗಿದೆ. ದುಷ್ಕರ್ಮಿಗಳು ಮನೆಯ ಗೇಟ್ ಬಳಿ ಇಬ್ಬರ ಫೋಟೋಗಳನ್ನು ಇಟ್ಟು, ಅವುಗಳಿಗೆ ಅರಿಶಿನ-ಕುಂಕುಮ ಹಚ್ಚಿ ಮಣ್ಣಿನ ಮಡಕೆಯೊಳಗೆ ಹಾಕಿದ್ದಾರೆ. ನಂತರ ಆ ಮಡಕೆಯನ್ನು ಗೇಟ್ ಮುಂಭಾಗದಲ್ಲೇ ಒಡೆದು ಹಾಕಿ ಹೋಗಿರುವುದು ಪತ್ತೆಯಾಗಿದೆ. ಬೆಳಿಗ್ಗೆ ಮನೆಯಿಂದ ಹೊರಬಂದ ವೇಳೆ ಈ ದೃಶ್ಯ ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಈ ಕೃತ್ಯದ ಹಿಂದೆ ಕಚೇರಿಯ ಕೆಲ ಸಿಬ್ಬಂದಿಗಳ ಕೈವಾಡವಿರಬಹುದು ಎಂದು ಎಸಿಎಫ್ ಮೋಹನ್ ಅನುಮಾನ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಒಳಗಿನ ಆಂತರಿಕ ಭಿನ್ನಾಭಿಪ್ರಾಯ ಅಥವಾ ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಬೆದರಿಸಲು ಅಥವಾ ಮಾನಸಿಕವಾಗಿ ಕುಗ್ಗಿಸಲು ಇಂತಹ ಕೆಟ್ಟ ಆಚರಣೆಯ ಮೊರೆ ಹೋಗಿರಬಹುದು ಎಂದು ಶಂಕಿಸಲಾಗಿದೆ.
ವಾಮಾಚಾರದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಎಸಿಎಫ್ ಮೋಹನ್ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಸರ್ಕಾರಿ ಅಧಿಕಾರಿಯೊಬ್ಬರ ನಿವಾಸದ ಮುಂದೆಯೇ ಇಂತಹ ವಾಮಾಚಾರದ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.