ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಇ-ಸಿಗರೇಟ್ ಮಾರಾಟ, ತಲಘಟ್ಟಪುರ ಪೊಲೀಸರಿಂದ ಯಶಸ್ವಿ ದಾಳಿ, ಕಾರಿನಲ್ಲಿದ್ದ ಖದೀಮನ ದಸ್ತಗಿರಿ
ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಹಿಂಭಾಗದಲ್ಲಿ ಕಾರಿನಲ್ಲಿ ಅಕ್ರಮವಾಗಿ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾತ್ಮೀದಾರರ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಯಿಂದ ವಿವಿಧ ಕಂಪನಿಗಳ ಒಟ್ಟು 440 ಇ-ಸಿಗರೇಟ್‌ಗಳು, 80 ಲಿಕ್ವಿಡ್ ಬಾಟಲ್‌ಗಳು, ಮೊಬೈಲ್ ಫೋನ್, ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಇ-ಸಿಗರೇಟ್‌ಗಳ ಒಟ್ಟು ಮೌಲ್ಯ ಸುಮಾರು 10 ಲಕ್ಷ ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯು ನೈಋತ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಅನಿತಾ ಬಿ ಹದ್ದಣ್ಣನವರ ಅವರ ಮಾರ್ಗದರ್ಶನದಲ್ಲಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಆರ್ ಎಸ್ ಚೌಧರಿ ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ ನಡೆದಿದೆ. ಸದ್ಯಕ್ಕೆ ಆರೋಪಿತನಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್