Share News

ಮಂಡ್ಯ: ಪೊಲೀಸ್ ಠಾಣೆಯಿಂದ ಕೈಗೆ ಬೇಡಿ ಸಮೇತ ಎಸ್ಕೇಪ್ ಆಗಿದ್ದ ಖದೀಮನೊಬ್ಬನನ್ನು ಸಾರ್ವಜನಿಕರು ಚೇಸ್ ಮಾಡಿ ಹಿಡಿದು ಮತ್ತೆ ಪೊಲೀಸರಿಗೆ ಒಪ್ಪಿಸಿರುವ ಸಿನಿಮೀಯ ಮಾದರಿಯ ಘಟನೆ ಮಂಡ್ಯ ನಗರದ ಗಾಂಧಿನಗರ ಬಡಾವಣೆಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ.

​ಘಟನೆಯ ವಿವರ:

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು, ಕೈಗೆ ಬೇಡಿ ತೊಡಿಸಿ ಠಾಣೆಗೆ ಕರೆತಂದಿದ್ದರು. ಆದರೆ ಪೊಲೀಸರ ಕಣ್ತಪ್ಪಿಸಿದ ಈ ಚಾಣಾಕ್ಷ ಖದೀಮ, ಠಾಣೆಯ ಕಾಂಪೌಂಡ್ ಹಾರಿ ಕೈಗೆ ಬೇಡಿ ಇರುವ ಸ್ಥಿತಿಯಲ್ಲೇ ಪರಾರಿಯಾಗಿದ್ದ.

​ಸಾರ್ವಜನಿಕರ ಸಮಯಪ್ರಜ್ಞೆ:

ಠಾಣೆಯಿಂದ ತಪ್ಪಿಸಿಕೊಂಡು ಗಾಂಧಿನಗರ ಬಡಾವಣೆಯ ರಸ್ತೆಯಲ್ಲಿ ಓಡುತ್ತಿದ್ದ ವ್ಯಕ್ತಿಯ ಕೈಯಲ್ಲಿದ್ದ ಬೇಡಿಯನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣ ಆತನನ್ನು ಬೆನ್ನಟ್ಟಿದ್ದಾರೆ. ಕಳ್ಳನನ್ನು ಹಿಡಿದು ವಿಚಾರಣೆ ನಡೆಸಿದಾಗ ಠಾಣೆಯಿಂದ ತಪ್ಪಿಸಿಕೊಂಡು ಬಂದಿರುವ ವಿಷಯ ತಿಳಿದು ಬಂದಿದೆ.

​ಸ್ಥಳೀಯರ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದ್ದು, ಸಾರ್ವಜನಿಕರು ಆರೋಪಿಯನ್ನು ಮರಳಿ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಗ್ರಾಮಸ್ಥರ ಈ ಸಾಹಸ ಹಾಗೂ ಜಾಗರೂಕತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


Share News