Share News

ನೆಲಮಂಗಲ: ಮಧ್ಯರಾತ್ರಿ ಬಿರಿಯಾನಿ ಸವಿಯಲೆಂದು ಬೈಕ್ ರೈಡ್ ಹೊರಟಿದ್ದ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನೆಲಮಂಗಲ ಸಮೀಪದ ಸೋಲೂರು ಬಳಿ ನಡೆದಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೋಲೂರು ಸಮೀಪದ ಮರೂರು ಹ್ಯಾಂಡ್ ಪೋಸ್ಟ್ ಬಳಿ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಬೆಂಗಳೂರಿನ ಪ್ರತಿಷ್ಠಿತ ಆಚಾರ್ಯ ಮತ್ತು ಸಪ್ತಗಿರಿ ಕಾಲೇಜುಗಳ ವಿದ್ಯಾರ್ಥಿಗಳಾದ ಮನೋಜ್ (21), ಅಭಿ (21) ಮತ್ತು ನವೀನ್ (22) ಎಂದು ಗುರುತಿಸಲಾಗಿದೆ.

ಮೃತ ವಿದ್ಯಾರ್ಥಿಗಳು ಶನಿವಾರ ರಾತ್ರಿ ‘ಮಿಡ್‌ನೈಟ್ ಬಿರಿಯಾನಿ’ ಸವಿಯಲು ಬೆಂಗಳೂರಿನಿಂದ ಮಳವಳ್ಳಿಗೆ ಬೈಕ್ ರೈಡ್ ಹೊರಟಿದ್ದರು ಎನ್ನಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಬೈಕ್ ಹಾಗೂ ಲಾರಿ ನಡುವೆ ಮರೂರು ಹ್ಯಾಂಡ್ ಪೋಸ್ಟ್ ಬಳಿ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತದೇಹಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಮೃತರ ಪೋಷಕರು ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ವಿದ್ಯಾರ್ಥಿಗಳ ಅಕಾಲಿಕ ಮರಣವು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಭವಿಷ್ಯದ ಕನಸುಗಳನ್ನು ಹೊತ್ತಿದ್ದ ಯುವಕರು ಕ್ಷಣಾರ್ಧದ ಅಪಘಾತದಲ್ಲಿ ಬಲಿಯಾಗಿರುವುದು ವಿಷಾದನೀಯ.

ಸ್ಥಳಕ್ಕೆ ಭೇಟಿ ನೀಡಿದ ಕುದೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತಿ ವೇಗ ಅಥವಾ ಅಜಾಗರೂಕತೆ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

​ಪೊಲೀಸ್ ಮನವಿ: ಯುವಕರು ರಾತ್ರಿ ವೇಳೆ ಲಾಂಗ್ ರೈಡ್ ಹೋಗುವಾಗ ಮತ್ತು ವೇಗದ ಚಾಲನೆ ಮಾಡುವಾಗ ಅತೀವ ಎಚ್ಚರಿಕೆ ವಹಿಸಬೇಕು. ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸುತ್ತದೆ ಎಂದು ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ.

ವರದಿ :- ಗಿಲ್ಬರ್ಟ್. ಜೆ


Share News