ದೊಡ್ಡಬಳ್ಳಾಪುರ: ಇಲ್ಲಿನ ಸರ್ಕಾರಿ ಶಾಲೆಯ ಆವರಣ ಹಾಗೂ ಮಸೀದಿ ಆವರಣದಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಗಂಧದ ಮರಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಅಂತರ-ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 200 ಕೆ.ಜಿ ತೂಕದ 13 ಗಂಧದ ಮರದ ತುಂಡುಗಳು, ಕೃತ್ಯಕ್ಕೆ ಬಳಸಿದ್ದ ಸ್ಯಾಂಟ್ರೋ ಕಾರು ಹಾಗೂ ಪೆಟ್ರೋಲ್ ಚಾಲಿತ ಗರಗಸವನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಮೂಲದ ವೆಂಕಟೇಶ್ (26) ಹಾಗೂ ತುಮಕೂರು ಮೂಲದ ಅರುಣ್ (34) ಬಂಧಿತ ಆರೋಪಿಗಳು. ಇವರು ದೊಡ್ಡಬಳ್ಳಾಪುರ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು, ವೃತ್ತಿಯಲ್ಲಿ ಬುಟ್ಟಿ ತಯಾರಿಸುವ ಕೆಲಸ ಮಾಡುತ್ತಾ ಈ ಕಳ್ಳತನ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೇ 13ರ ಮಧ್ಯರಾತ್ರಿ ದೊಡ್ಡಬಳ್ಳಾಪುರದ ಕಛೇರಿ ಪಾಳ್ಳಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ದರ್ಗಾ ಮೊಹಲ್ಲಾ ಬಳಿಯ ಮಸೀದಿ ಮತ್ತು ಸ್ಮಶಾನದ ಜಾಗದಲ್ಲಿ ಬೆಳೆದಿದ್ದ ಬೆಲೆಬಾಳುವ ಗಂಧದ ಮರಗಳನ್ನು ದುಷ್ಕರ್ಮಿಗಳು ಮಧ್ಯರಾತ್ರಿ ಕಟಾವ್ ಮಾಡಿ ಕಳವು ಮಾಡಿದ್ದರು. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರು. ಸಿಸಿಟಿವಿ ಸುಳಿವು ಹಾಗೂ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ನಗರ ಪೊಲೀಸರು ಜೂನ್ 13ರ ಮಧ್ಯರಾತ್ರಿ ಕೃತ್ಯ ಎಸಗಿದ್ದ ಆರೋಪಿಗಳನ್ನು ಬಂಧಿಸಿ, ಬೇರೆಡೆಗೆ ಸಾಗಿಸಲು ಬಚ್ಚಿಟ್ಟಿದ್ದ 200 ಕೆ.ಜಿ ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುತ್ತುರಾಜ್ ನೇತೃತ್ವದ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಪಾಂಡುರಂಗ, ಹುಸೇನ್ ಸಾಬ್, ಶಿವಾನಂದ್, ಪ್ರದೀಪ್, ಮುನಿರಾಜು ಹಾಗೂ ರೂಪೇಶ್ ಯಾದವ್ ಪಾಲ್ಗೊಂಡಿದ್ದರು. ಕಳ್ಳರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಡೀ ಪೊಲೀಸ್ ತಂಡದ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಇಲಾಖೆಯಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ವರದಿ :- ಶಶಿಕುಮಾರ್ ಬೆಂಗಳೂರು ಗ್ರಾಮಾಂತರ ವರದಿಗಾರರು