Share News

ಮಾದಕ ವಸ್ತು ಜಾಲದ ಮೇಲೆ ಆರಕ್ಷಕ ಭರ್ಜರಿ ದಾಳಿ, ವಿದೇಶಿಗರು ಸೇರಿದಂತೆ 10 ಆರೋಪಿಗಳ ಬಂಧನ, ಈಶಾನ್ಯ – ಆಗ್ನೇಯ ಮತ್ತು ಪೂರ್ವ ವಿಭಾಗದ ಪೊಲೀಸರಿಂದ ಸತತ ಕಾರ್ಯಾಚರಣೆ.

ಯಲಹಂಕ ಉಪನಗರ, ದೇವರ ಜೀವನ ಹಳ್ಳಿ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಮತ್ತು ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಮಹಿಳೆಯರು, ಒಬ್ಬ ವಿದೇಶಿ ಪುರುಷ, ಹೊರರಾಜ್ಯದ ಐವರು ಹಾಗೂ ಇಬ್ಬರು ಸ್ಥಳೀಯರು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಿಂದ ಬರೋಬ್ಬರಿ 5 ಕೆಜಿ 919 ಗ್ರಾಂ ಮೆಥಾಂಫೆಟಮೈನ್, 1 ಕೆಜಿ 151 ಗ್ರಾಂ ಕೋಕೇನ್, 21 ಕೆಜಿ ಗಾಂಜಾ ಮತ್ತು 19 ಗ್ರಾಂ ಎಕ್ಸ್‌ಟೆಸಿ ಪಿಲ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಅಂದಾಜು ಮೌಲ್ಯ ಸುಮಾರು 11,81,63,000 ಆಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 23,63,26,000 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಸದ್ಯ ಎಲ್ಲಾ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ವಿದೇಶಿ ಹಾಗೂ ಹೊರರಾಜ್ಯದ ವ್ಯಕ್ತಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದಿದೆ. ಈ ತಂಡದ ನೇತೃತ್ವವನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಜಿ ಕೆ ಮಿಥುನ್ ಕುಮಾರ್ , ಆಗ್ನೇಯ ವಿಭಾಗದ ಶ್ರೀ. ಮೊಹಮ್ಮದ್ ಸುಜೀತ ಎಂ ಎಸ್ ಮತ್ತು ಪೂರ್ವ ವಿಭಾಗದ ಡಾ. ವಿಕ್ರಮ್ ಆಮಟೆ ಅವರು ವಹಿಸಿದ್ದರು. ಇವರಿಗೆ ಸಹಾಯಕ ಪೊಲೀಸ್ ಆಯುಕ್ತರುಗಳಾದ ಶ್ರೀ. ನರಸಿಂಹಮೂರ್ತಿ ಪಿ (ಯಲಹಂಕ), ಶ್ರೀಮತಿ ಗೀತಾ (ಪುಲಕೇಶಿ ನಗರ), ಶ್ರೀ. ಉಮಾಶಂಕರ್ ಎಂಹೆಚ್ (ಬಾಣಸವಾಡಿ), ಶ್ರೀ. ಪ್ರಕಾಶ್ ರಾಥೋಡ್ (ಕೆ ಜಿ ಹಳ್ಳಿ), ಶ್ರೀ. ವಾಸುದೇವ್ (ಮಡಿವಾಳ) ಮತ್ತು ಶ್ರೀ. ಶಿವಶಂಕರ ರೆಡ್ಡಿ (ಮೈಕೋಲೇಔಟ್) ಅವರು ಸಾಥ್ ನೀಡಿದ್ದಾರೆ.

ಕ್ಷೇತ್ರ ಮಟ್ಟದಲ್ಲಿ ದಾಳಿಯನ್ನು ಯಶಸ್ವಿಗೊಳಿಸಿದ ಇನ್ಸ್‌ಪೆಕ್ಟರ್‌ಗಳ ತಂಡದಲ್ಲಿ ಯಲಹಂಕ ಉಪನಗರದ ಶ್ರೀ. ಸುಧಾಕರ್ ರೆಡ್ಡಿ ಎ, ದೇವರ ಜೀವನ ಹಳ್ಳಿಯ ಶ್ರೀ. ಸುನೀಲ್ ಹೆಚ್ ಬಿ, ಬಾಣಸವಾಡಿಯ ಶ್ರೀ. ಅರುಣ್ ಸಾಳುಂಕೆ, ಪುಲಕೇಶಿ ನಗರದ ಶ್ರೀ. ಗೋವಿಂದ ರಾಜು, ಬೊಮ್ಮನಹಳ್ಳಿಯ ಶ್ರೀ. ಪ್ರೀತಮ್ ಎ ಡಿ ಮತ್ತು ಕೋರಮಂಗಲ ಪೊಲೀಸ್ ಠಾಣೆಯ ಶ್ರೀ. ಲೂಹಿ ರಾಮರೆಡ್ಡಿ ಎಸ್ ಅವರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಅಧಿಕಾರಿಗಳ ತಂಡವು ನಿಖರ ಮಾಹಿತಿ ಆಧರಿಸಿ ಮಾದಕ ವಸ್ತು ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News