ಮಾಗಡಿ: ಮಾಗಡಿ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಎಸಗಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಾಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡ ಯಶಸ್ವಿಯಾಗಿದೆ.
ಬಂಧಿತರಿಂದ ಸುಮಾರು ₹20,5,000 ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು, ವಿವಿಧ ವಾಹನಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ:
ದಿನಾಂಕ 07.08.2026 ರಂದು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೇರಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು, ಮಲಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಅಲ್ಲದೆ ಅದೇ ದಿನ ಗೇರಹಳ್ಳಿ ಗ್ರಾಮದ ದೇವಸ್ಥಾನವೊಂದರಲ್ಲಿ ಹಾಗೂ ಬೈಚಾಪುರ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಎಸಗಿದ್ದರು. ಈ ಕುರಿತು ಮಾಗಡಿ ಠಾಣೆಯಲ್ಲಿ (ಮೊ.ಸಂ: 171/2026, 173/2026 ಮತ್ತು 176/2026) ಬಿಎನ್ಎಸ್ ಕಾಯ್ದೆಯಡಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
12 ಪ್ರಕರಣಗಳ ರಹಸ್ಯ ಭೇದಿಸಿದ ಪೊಲೀಸರು:
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸಾಲು ಸಾಲು ಕಳ್ಳತನಗಳ ಸತ್ಯಾಸತ್ಯತೆ ಹೊರಬಿದ್ದಿದೆ. ಈ ಕಾರ್ಯಾಚರಣೆಯ ಮೂಲಕ ಮಾಗಡಿ ಠಾಣೆಯ 3, ಕುದೂರು ಠಾಣೆಯ 3, ತಾವರೆಕೆರೆ, ಬಿಡದಿ, ಅಕ್ಕೂರು, ಸಾತನೂರು ಹಾಗೂ ಎಂ.ಕೆ. ದೊಡ್ಡಿ ಠಾಣೆಗಳ ತಲಾ 1 ಪ್ರಕರಣಗಳು ಸೇರಿ ಒಟ್ಟು 12 ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ವಶಪಡಿಸಿಕೊಂಡ ಸ್ವತ್ತುಗಳ ವಿವರ:
ಚಿನ್ನಾಭರಣ: 78 ಗ್ರಾಂ ಚಿನ್ನದ ಆಭರಣಗಳು
ಬೆಳ್ಳಿ ವಸ್ತುಗಳು: 2 ಕೆಜಿ 558 ಗ್ರಾಂ ಬೆಳ್ಳಿಯ ಆಭರಣ ಹಾಗೂ ವಸ್ತುಗಳು
ವಾಹನಗಳು: 6 ದ್ವಿಚಕ್ರ ವಾಹನಗಳು
ಇತರ ಸಾಮಗ್ರಿಗಳು: ಹಿತ್ತಾಳೆ ವಸ್ತುಗಳು
ಕೃತ್ಯಕ್ಕೆ ಬಳಸಿದ ವಾಹನಗಳು: 1 ಕಾರು, 1 ಬೊಲೆರೊ ಹಾಗೂ 1 ಬೈಕ್ ಜಪ್ತಿ.
ಸರಣಿ ಕಳ್ಳತನ ಎಸಗುತ್ತಿದ್ದ ಅಂತರ-ಠಾಣೆ ಕಳ್ಳರ ಜಾಲವನ್ನು ಯಶಸ್ವಿಯಾಗಿ ಮಟ್ಟಹಾಕಿದ ಮಾಗಡಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.