Share News

ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಮಿತಿ ಹೇರಲಾಗಿದೆ ಎಂಬ ವದಂತಿಗಳು ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆಯಾಗಿದೆ ಎಂಬ ವರದಿಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದವು. ಈ ಎಲ್ಲಾ ವದಂತಿಗಳಿಗೆ ಕೇಂದ್ರ ಸರ್ಕಾರ ಮತ್ತು ಪ್ರಮುಖ ತೈಲ ಸಂಸ್ಥೆಯಾದ ‘ಇಂಡಿಯನ್ ಆಯಿಲ್’ ಅಧಿಕೃತವಾಗಿ ತೆರೆ ಎಳೆದಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಖರೀದಿಗೆ ಯಾವುದೇ ರೀತಿಯ ಮಿತಿ ಹೇರಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಇಂಧನ ಕೊರತೆಯ ಸುಳ್ಳು ಸುದ್ದಿ ಹಬ್ಬಿಸಿ ಅಕ್ರಮ ವಿತರಣೆ ಮತ್ತು ಕಾಳಸಂತೆ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಜಂಟಿ-ಸಚಿವಾಲಯದ ಪ್ರಮುಖ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು, “ದೇಶದ ನಾಗರಿಕರ ಅವಶ್ಯಕತೆಗಳನ್ನು ಪೂರೈಸಲು ನಮ್ಮಲ್ಲಿ ಇಂಧನದ ಸಾಕಷ್ಟು ದಾಸ್ತಾನುಗಳಿವೆ. ಪ್ರಸ್ತುತ ಜಾಗತಿಕ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ತೈಲ ಆಮದುಗಳ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತಿದ್ದರೂ ಸಹ, ಭಾರತವು ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಮತ್ತು ನೈಸರ್ಗಿಕ ಅನಿಲದ ಸೂಕ್ತ ದಾಸ್ತಾನನ್ನು ಕಾಯ್ದುಕೊಂಡಿದೆ. ನಾಗರಿಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಸರ್ಕಾರ ಈಗಾಗಲೇ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಎಲ್‌ಪಿಜಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ” ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.

ಜಾಗತಿಕ ಬಿಕ್ಕಟ್ಟಿನ ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ದೇಶಾದ್ಯಂತ ಸುಮಾರು ೧.೩೪ ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಯಶಸ್ವಿಯಾಗಿ ವಿತರಣೆ ಮಾಡಲಾಗಿದೆ. ವಾಣಿಜ್ಯ ಎಲ್‌ಪಿಜಿ ಮಾರಾಟವು ಭರ್ಜರಿ ೨೩,೫೮೮ ಟನ್‌ಗಳನ್ನು ತಲುಪಿದೆ. ಇನ್ನು ನೈಸರ್ಗಿಕ ಅನಿಲದ (Natural Gas) ವಿಷಯದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದು, ಹೊಸದಾಗಿ ೭.೯೯ ಲಕ್ಷ ಗ್ರಾಹಕರನ್ನು ನೋಂದಾಯಿಸಿಕೊಳ್ಳಲಾಗಿದೆ. ಇದರೊಂದಿಗೆ ದೇಶಾದ್ಯಂತ ಇಂಧನ ವಿತರಣೆಯ ಮೇಲ್ವಿಚಾರಣೆ ನಡೆಸಲು ಮತ್ತು ಯಾವುದೇ ರೀತಿಯ ಅಕ್ರಮಗಳನ್ನು ತಡೆಯಲು ತಾಂತ್ರಿಕ ಹಾಗೂ ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಧನ ಕೊರತೆಯ ನೆಪ ಒಡ್ಡಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಸರ್ಕಾರ ಸಮರ ಸಾರಿದೆ. ದೇಶಾದ್ಯಂತ ತೈಲ ವಿತರಕರು ಹಾಗೂ ದಾಸ್ತಾನು ಮಳಿಗೆಗಳ ಮೇಲೆ ಈವರೆಗೆ ಬರೋಬ್ಬರಿ ೫೦೦ಕ್ಕೂ ಹೆಚ್ಚು ಕಡೆಗಳಲ್ಲಿ ತನಿಖಾ ತಂಡಗಳು ಹಠಾತ್ ದಾಳಿ ನಡೆಸಿವೆ. ನಿಯಮ ಉಲ್ಲಂಘಿಸಿದ ೧೧೧ ಮಂದಿಗೆ ಈಗಾಗಲೇ ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ೩೫ ಪ್ರಮುಖ ವಿತರಕರಿಗೆ ಕಟ್ಟುನಿಟ್ಟಿನ ನೋಟಿಸ್ ನೀಡಲಾಗಿದ್ದು, ಗಂಭೀರ ಅಕ್ರಮ ಎಸಗಿದ ಆರೋಪದ ಮೇಲೆ ಒಬ್ಬ ಇಂಧನ ವಿತರಕನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಸ್ಪೆಂಡ್ (ಅಮಾನತು) ಮಾಡಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ವಿವರಿಸಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಇಂಧನ ಕೊರತೆಯಂತಹ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಕೇಂದ್ರ ಸರ್ಕಾರವೇ ಅಧಿಕೃತವಾಗಿ ಇಂಧನ ದಾಸ್ತಾನು ಭದ್ರವಾಗಿದೆ ಎಂದು ಪ್ರಕಟಿಸಿರುವುದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಗ್ರಾಹಕರ ಹಿತರಕ್ಷಣೆ ಕಾಯಲು ಹಾಗೂ ಕಾಳಸಂತೆಕೋರರನ್ನು ಮಟ್ಟಹಾಕಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ.

 


Share News