ಗದಗ: ಕಸ ವಿಲೇವಾರಿ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಗ್ಯಾಂಗ್ವೊಂದು ಮನೆಗೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿ, ಕಾರು ಹಾಗೂ ಕಿಟಕಿ ಗ್ಲಾಸ್ಗಳನ್ನು ಧ್ವಂಸಗೊಳಿಸಿರುವ ಘಟನೆ ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ವಿವೇಕಾನಂದ ನಗರದ ನಿವಾಸಿ ಹನುಮಂತ ಎಂಬುವವರು ಸ್ಥಳೀಯ ಕಸದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದರು. ಇದರಿಂದ ಆಕ್ರೋಶಗೊಂಡ ಗಣೇಶ ಹಾಗೂ ಅವರ ಕುಟುಂಬ ಸದಸ್ಯರು ಎನ್ನಲಾದ 8 ರಿಂದ 10 ಜನರ ಗುಂಪು ರಾತ್ರಿ ವೇಳೆ ಹನುಮಂತ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿದೆ.
ದಾಳಿ ನಡೆಸಿದ ದುಷ್ಕರ್ಮಿಗಳು ಮನೆಯ ಬಾಗಿಲು, ಕಿಟಕಿಯ ಗ್ಲಾಸ್ಗಳು ಹಾಗೂ ಹೊರಗೆ ನಿಲ್ಲಿಸಿದ್ದ ಕಾರಿನ ಗ್ಲಾಸ್ಗಳನ್ನು ಒಡೆದು ಹಾಕಿ ವಿಕೃತಿ ಮೆರೆದಿದ್ದಾರೆ. ಏಕಾಏಕಿ ನಡೆದ ಈ ಘಟನೆಯಿಂದ ಮನೆಯಲ್ಲಿದ್ದ ಮಕ್ಕಳು ಹಾಗೂ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. “ಸಾಮಾಜಿಕ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದೇ ತಪ್ಪಾಯ್ತಾ?” ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದು, ದಾಂಧಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದೂರಿಗೆ ಪ್ರತಿದೂರು ದಾಖಲು:
ಘಟನೆಗೆ ಸಂಬಂಧಿಸಿದಂತೆ ಎರಡೂ ಕುಟುಂಬಗಳಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣಗಳನ್ನು ಕಾಯ್ದಿರಿಸಿಕೊಂಡು ತನಿಖೆ ಆರಂಭಿಸಿದ್ದಾರೆ.