Share News

ವಿಶಾಖಪಟ್ಟಣಂ: ಅಕ್ರಮ ಸಂಬಂಧದ ವಿವಾದವೊಂದು ವಿಕೋಪಕ್ಕೆ ತಿರುಗಿ, ನೌಕಾಪಡೆಯ ಉದ್ಯೋಗಿಯೊಬ್ಬ ವಿವಾಹಿತ ಮಹಿಳೆಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿ, ಮೃತದೇಹವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟ ಘಟನೆ ಜಿಲ್ಲೆಯ ಗಾಜುವಾಕದಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ರವೀಂದ್ರ ಮೂಲತಃ ವಿಜಯನಗರ ಜಿಲ್ಲೆಯವನಾಗಿದ್ದು, ವಿಶಾಖಪಟ್ಟಣಂನಲ್ಲಿ ನೌಕಾಪಡೆಯಲ್ಲಿ (Navy) ಕೆಲಸ ಮಾಡುತ್ತಿದ್ದಾನೆ. ರವೀಂದ್ರನ ಪತ್ನಿ ಇತ್ತೀಚೆಗೆ ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಈತ ಮೌನಿಕಾ (28) ಎಂಬ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ.

ಮೌನಿಕಾ ಇತ್ತೀಚೆಗೆ ಹಣಕ್ಕಾಗಿ ರವೀಂದ್ರನ ಮೇಲೆ ಪದೇ ಪದೇ ಒತ್ತಡ ಹೇರಲು ಶುರು ಮಾಡಿದ್ದಳು. ಇದೇ ವಿಷಯವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪತ್ನಿ ಮನೆಯಲ್ಲಿ ಇಲ್ಲದ ಸಮಯ ಸಾಧಿಸಿ ರವೀಂದ್ರ ಮೌನಿಕಾಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಹಣದ ವಿಚಾರವಾಗಿ ಮತ್ತೆ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ರವೀಂದ್ರ ಚಾಕುವಿನಿಂದ ಇರಿದು ಮೌನಿಕಾಳನ್ನು ಹತ್ಯೆ ಮಾಡಿದ್ದಾನೆ.

ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಮುಂದಾದ ಆರೋಪಿ, ಮೌನಿಕಾಳ ಮೃತದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿದ್ದಾನೆ. ದೇಹದ ಅರ್ಧ ಭಾಗವನ್ನು ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟರೆ, ಇನ್ನುಳಿದ ಅರ್ಧ ಭಾಗವನ್ನು ಬಂಡಲ್‌ನಲ್ಲಿ ಸುತ್ತಿ ಮನೆಯ ಮೂಲೆಯೊಂದರಲ್ಲಿ ಬಚ್ಚಿಟ್ಟಿದ್ದಾನೆ. ಈ ಘೋರ ಕೃತ್ಯ ಎಸಗಿದ ಬಳಿಕ ರವೀಂದ್ರ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ.

ಆರೋಪಿಯ ಸ್ವಯಂಪ್ರೇರಿತ ಶರಣಾಗತಿಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಗಾಜುವಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಹಣವೊಂದೇ ಕಾರಣವೇ ಅಥವಾ ಬೇರೆ ಯಾವುದಾದರೂ ಆಯಾಮಗಳಿವೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ. ದೆಹಲಿಯ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣವನ್ನು ನೆನಪಿಸುವಂತಿರುವ ಈ ಘಟನೆಯಿಂದ ವಿಶಾಖಪಟ್ಟಣಂ ಜನತೆ ಬೆಚ್ಚಿಬಿದ್ದಿದ್ದಾರೆ.

ವರದಿ :- ಗಿಲ್ಬರ್ಟ್ ಜೆ


Share News