ಮೈಸೂರು: ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಆಶಯದೊಂದಿಗೆ ಆರಂಭವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ‘ಇಂದಿರಾ ಕ್ಯಾಂಟೀನ್’ ಯೋಜನೆ ಇದೀಗ ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 26 ಕ್ಯಾಂಟೀನ್‌ಗಳ ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾದ ಕೋಟ್ಯಂತರ ರೂಪಾಯಿ ಹಣ ಬಾಕಿ ಉಳಿದಿರುವುದು ಯೋಜನೆಯ ಅಸ್ತಿತ್ವಕ್ಕೆ ಧಕ್ಕೆ ತಂದಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಯುಡಿಸಿ) ಮಾಹಿತಿಯ ಪ್ರಕಾರ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 14 ಹಾಗೂ ಜಿಲ್ಲೆಯ ವಿವಿಧ ತಾಲೂಕು, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ 12 ಕ್ಯಾಂಟೀನ್‌ಗಳು ಸೇರಿ ಒಟ್ಟು 26 ಘಟಕಗಳ ಗುತ್ತಿಗೆದಾರರಿಗೆ 4.49 ಕೋಟಿ ರೂಪಾಯಿ ಪಾವತಿಸಬೇಕಿದೆ.
ಅದರಲ್ಲೂ ಪ್ರಮುಖವಾಗಿ ನಗರ ವ್ಯಾಪ್ತಿಯ 6 ಕ್ಯಾಂಟೀನ್‌ಗಳಿಗೆ ಅಕ್ಟೋಬರ್ 2024ರಿಂದ ಜನವರಿ 2026ರವರೆಗೆ, ಅಂದರೆ ಸುಮಾರು ಒಂದು ವರ್ಷ ಐದು ತಿಂಗಳ ಅವಧಿಗೆ ಒಟ್ಟು 2.82 ಕೋಟಿ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಇಷ್ಟು ದೀರ್ಘಕಾಲ ಹಣ ಪಾವತಿಯಾಗದ ಕಾರಣ ಗುತ್ತಿಗೆದಾರರು ದೈನಂದಿನ ನಿರ್ವಹಣೆಗೆ ಹಣವಿಲ್ಲದೆ ಹೈರಾಣಾಗಿದ್ದಾರೆ.
ಹಣಕಾಸಿನ ಕೊರತೆಯಿಂದಾಗಿ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಬಡವರು, ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಕೇವಲ 5 ರೂಪಾಯಿಗೆ ತಿಂಡಿ ಹಾಗೂ 10 ರೂಪಾಯಿಗೆ ಊಟ ಒದಗಿಸುವ ಈ ಯೋಜನೆಯು ಸಮರ್ಪಕ ಅನುದಾನವಿಲ್ಲದೆ ಸೊರಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಹಲವು ಕ್ಯಾಂಟೀನ್‌ಗಳು ಬೀಗ ಹಾಕುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಕೇವಲ ಮೈಸೂರು ಮಾತ್ರವಲ್ಲದೆ, ಬೆಂಗಳೂರಿನಲ್ಲೂ ಲಕ್ಷಾಂತರ ರೂಪಾಯಿ ಬಾಕಿ ಪಾವತಿಯಾಗದ ಕಾರಣ ಕೆಲವು ಕ್ಯಾಂಟೀನ್‌ಗಳು ಈಗಾಗಲೇ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. 2017ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭವಾದ ಈ ಯೋಜನೆಗೆ ಪದೇ ಪದೇ ಅನುದಾನದ ವಿಳಂಬ ಮತ್ತು ನಿರ್ವಹಣಾ ಸಮಸ್ಯೆಗಳು ಅಡ್ಡಿಯಾಗುತ್ತಿವೆ. 2026ರ ಬಜೆಟ್‌ನಲ್ಲಿ ಹೊಸದಾಗಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ಗಳನ್ನು ಘೋಷಿಸಲಾಗಿದೆಯಾದರೂ, ಸದ್ಯ ಅಸ್ತಿತ್ವದಲ್ಲಿರುವ ಕ್ಯಾಂಟೀನ್‌ಗಳ ಬಾಕಿ ಪಾವತಿಯೇ ಸವಾಲಾಗಿ ಪರಿಣಮಿಸಿದೆ.
ಬಡವರ ಹಸಿವು ನೀಗಿಸುವ ಈ ಜನಪ್ರಿಯ ಯೋಜನೆಯನ್ನು ಉಳಿಸಿಕೊಳ್ಳಲು ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಸಾರ್ವಜನಿಕರು ಮತ್ತು ಗುತ್ತಿಗೆದಾರರು ಆಗ್ರಹಿಸಿದ್ದಾರೆ.