ಬೆಂಗಳೂರು: ನಗರದ ಬೇಗೂರು ವ್ಯಾಪ್ತಿಯ ಖಾಸಗಿ ವಸತಿ ಸಮುಚ್ಚಯವೊಂದರಲ್ಲಿ ಗಣೇಶ ದೇವಸ್ಥಾನದ ವಿಚಾರವಾಗಿ ಭಾರಿ ವಾಗ್ವಾದ ನಡೆದಿದ್ದು, ಪವಿತ್ರ ಸ್ಥಳಕ್ಕೆ ಅಪಚಾರವೆಸಗಿದ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ನಿವಾಸಿಗಳ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಾರ್ಚ್ 22ರಂದು ನಡೆದ ಈ ಘಟನೆಯಲ್ಲಿ, ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ಪಾದರಕ್ಷೆ ಧರಿಸಿಯೇ ದೇವಸ್ಥಾನದ ಆವರಣಕ್ಕೆ ಪ್ರವೇಶಿಸಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ದೃಶ್ಯಗಳು ಅಲ್ಲಿನ ನಿವಾಸಿಗಳ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಭಕ್ತರು ದೂರಿದ್ದಾರೆ.
ಆರೋಪಿಗಳು ಕೇವಲ ದೈಹಿಕವಾಗಿ ಗಲಾಟೆ ಮಾಡಿದ್ದಷ್ಟೇ ಅಲ್ಲದೆ, ಅಪಾರ್ಟ್ಮೆಂಟ್‌ನ ನಿವಾಸಿಗಳ ವಾಟ್ಸಾಪ್ ಗುಂಪುಗಳಲ್ಲಿ ಹಿಂದೂ ಆರಾಧ್ಯ ದೈವದ ವಿರುದ್ಧ ಅತ್ಯಂತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಸುತ್ತಿಗೆಯಿಂದ ಗುಡಿಯನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿವಾದವು ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಗಣೇಶ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದೆ. ಅಪಾರ್ಟ್ಮೆಂಟ್‌ನ ಶೇ. 90ರಷ್ಟು ನಿವಾಸಿಗಳು ಈ ಭಕ್ತಿ ಕೇಂದ್ರದ ಪರವಾಗಿದ್ದರೂ, ಕೇವಲ ಶೇ. 10ರಷ್ಟು ಜನರು ಇದರ ವಿರುದ್ಧ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂತಿಮವಾಗಿ ನ್ಯಾಯಾಲಯವು ದೇವಸ್ಥಾನದ ಪರವಾಗಿಯೇ ತೀರ್ಪು ನೀಡಿದ್ದರೂ ಸಹ, ಕೆಲವರು ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಉಳಿದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಇಡೀ ಘಟನೆಗೆ ಸಂಬಂಧಿಸಿದಂತೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಎನ್‌ಸಿಆರ್ (NCR) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕ ಶಾಂತಿ ಕದಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.