ಆನೇಕಲ್: ತಟ್ಟೆಕೆರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮವಾಗಿ ವನ್ಯಜೀವಿಗಳ ಬೇಟೆಯಾಡಲು ಸಂಚು ರೂಪಿಸಿದ್ದ ಏಳು ಮಂದಿ ಆರೋಪಿಗಳನ್ನು ಆನೇಕಲ್ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ಮೂಲದ ಮೂವರು ಹಾಗೂ ಯಾದಗಿರಿ ಜಿಲ್ಲೆಯ ನಾಲ್ವರು ಸೇರಿ ಒಟ್ಟು ಏಳು ಮಂದಿ ಬಂಧಿತ ಆರೋಪಿಗಳಾಗಿದ್ದಾರೆ. ಶುಕ್ರವಾರ ತಡರಾತ್ರಿ ಸುಮಾರು 1:30 ರ ವೇಳೆಗೆ ಮಹದೇಶ್ವರ ಅರಣ್ಯ ಪ್ರದೇಶದ ತಟ್ಟೆಕೆರೆ ಸಮೀಪ ಈ ತಂಡವು ಬೇಟೆಯಾಡಲು ಹೊಂಚು ಹಾಕುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ವಾಡಿಕೆಯ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಸಿಕ್ಕ ಖಚಿತ ಮಾಹಿತಿಯನ್ನಾಧರಿಸಿ ತಟ್ಟೆಕೆರೆ ಅರಣ್ಯ ವಲಯದಲ್ಲಿ ತಕ್ಷಣವೇ ದಾಳಿ ನಡೆಸಿದ್ದಾರೆ. ಈ ವೇಳೆ ಸಿಕ್ಕಿಬಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಲು ತಂದಿದ್ದ ಒಂದು ಕಾರು ಮತ್ತು ಬ್ಯಾಟರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಕದ್ದಮೆ
“ಬಂಧಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ವಿವಿಧ ಸೆಕ್ಷನ್ಗಳ ಮುಖೇನ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ,” ಎಂದು ಆನೇಕಲ್ ವನ್ಯಜೀವಿ ವಲಯ ಅರಣ್ಯಾಧಿಕಾರಿ ಬಿ.ಕೆ. ಪುಷ್ಪಲತಾ ಅವರು ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬನ್ನೇರುಘಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ದಾಳಿಯಲ್ಲಿ ಆನೇಕಲ್ ವನ್ಯಜೀವಿ ವಲಯ ಅರಣ್ಯಾಧಿಕಾರಿ ಪುಷ್ಪಲತಾ ಬಿ.ಕೆ., ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಹಾಗೂ ಇಲಾಖೆಯ ಸಿಬ್ಬಂದಿಗಳಾದ ಬೀರೇಶ್ ಮತ್ತು ಜಗದೀಶ್ ಸಕ್ರಿಯವಾಗಿ ಪಾಲ್ಗೊಂಡು ಅರಣ್ಯ ಕಳ್ಳರ ಸಂಚನ್ನು ವಿಫಲಗೊಳಿಸಿದ್ದಾರೆ. ಅರಣ್ಯ ಇಲಾಖೆಯ ಈ ತ್ವರಿತ ನಡೆ ಸಾರ್ವಜನಿಕ ವಲಯದಲ್ಲಿ ಹಾಗೂ ವನ್ಯಜೀವಿ ಪ್ರೇಮಿಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.