Share News

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಜರುಗಿದ್ದು, ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮತ್ತು ನೂತನ ಹುದ್ದೆಗಳಿಗೆ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

1994ನೇ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರಣಬ್ ಮೊಹಾಂತಿ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಹುದ್ದೆಯಿಂದ ತಕ್ಷಣದಿಂದಲೇ ವರ್ಗಾವಣೆ ಮಾಡಲಾಗಿದೆ. ಇವರನ್ನು ಅಪರಾಧ ತನಿಖಾ ಇಲಾಖೆ (CID), ವಿಶೇಷ ಘಟಕಗಳು ಹಾಗೂ ಆರ್ಥಿಕ ಅಪರಾಧ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ (DGP) ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.

​ಇದರೊಂದಿಗೆ, ಪ್ರಸ್ತುತ ಸಮಾಜದಲ್ಲಿ ಸವಾಲಾಗಿ ಪರಿಣಮಿಸಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಡಾ. ಪ್ರಣಬ್ ಮೊಹಾಂತಿ ಅವರಿಗೆ ಸಿಐಡಿ ವ್ಯಾಪ್ತಿಯ ಸೈಬರ್ ಅಪರಾಧಗಳ ಪೊಲೀಸ್ ಮಹಾನಿರ್ದೇಶಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ (Concurrent Charge) ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ವಹಿಸಲಾಗಿದೆ.

ಮತ್ತೊಂದೆಡೆ, 2006ನೇ ಬ್ಯಾಚ್‌ನ ದಕ್ಷ ಐಪಿಎಸ್ ಅಧಿಕಾರಿ ಡಾ. ಚಂದ್ರಗುಪ್ತ ಅವರನ್ನು ಬೆಂಗಳೂರು ಗುಪ್ತಚರ ವಿಭಾಗದ ಭದ್ರತಾ ಘಟಕದ ಪೊಲೀಸ್ ಮಹಾನಿರೀಕ್ಷಕರ (ಐಜಿಪಿ) ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಇವರನ್ನು ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕರಾಗಿ (IGP) ನೇಮಕ ಮಾಡಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ಲಭ್ಯು ರಾಮ್ (IPS) ಅವರ ವರ್ಗಾವಣೆಯಿಂದಾಗಿ ಈ ಸ್ಥಾನವು ತೆರವಾಗಿತ್ತು.

​ವಿಶೇಷ ಸೂಚನೆ: ಐಪಿಎಸ್ (ವೇತನ) ನಿಯಮಗಳು-2016ರ ನಿಯಮ 12ರ ಅನ್ವಯ, ಈ ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕರ ಹುದ್ದೆಯನ್ನು ಸಿಐಡಿ ಪೊಲೀಸ್ ಮಹಾನಿರೀಕ್ಷಕರ ಕ್ಯಾಡರ್ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಹುದ್ದೆಯೆಂದು ಸರ್ಕಾರ ಘೋಷಿಸಿದೆ.

ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಈ ವರ್ಗಾವಣೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಮೂಲಗಳು ತಿಳಿಸಿವೆ.

 


Share News