ಮಡಿಕೇರಿ: ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಕೊಡಗಿಗೆ ಬಂದಿದ್ದ ಮೈಸೂರು ಮೂಲದ ಯುವತಿಯೊಬ್ಬರು ಹೋಂಸ್ಟೇಯೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ಹೋಂಸ್ಟೇಯೊಂದರಲ್ಲಿ ಈ ದುರಂತ ಸಂಭವಿಸಿದೆ.
ಮೈಸೂರಿನ ಯರಗನಹಳ್ಳಿ ನಿವಾಸಿಗಳಾದ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನುತಾ (27) ಮೃತಪಟ್ಟ ದುರ್ದೈವಿಯಾಗಿದ್ದಾರೆ. ವಿನುತಾ ಅವರು ವೀಕೆಂಡ್ ಕಳೆಯಲು ತಮ್ಮ 14 ಮಂದಿ ಸ್ನೇಹಿತರ ಗುಂಪಿನೊಂದಿಗೆ ಕೊಡಗು ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಚೌಡ್ಲು ಗ್ರಾಮದ ಹೋಂಸ್ಟೇಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರ ತಂಡದಲ್ಲಿ, ಬೆಳಿಗ್ಗೆ ವಿನುತಾ ಅವರು ಸ್ನಾನಕ್ಕಾಗಿ ಬಾತ್‌ರೂಮ್‌ಗೆ ತೆರಳಿದ್ದರು. ಆದರೆ, ಬಹಳ ಹೊತ್ತಾದರೂ ಅವರು ಹೊರಗೆ ಬಾರದಿದ್ದಾಗ ಮತ್ತು ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಸಂಶಯಗೊಂಡು ನೋಡಿದಾಗ, ಅವರು ಬಾತ್‌ರೂಮ್‌ನಲ್ಲಿ ಏಕಾಏಕಿ ಕುಸಿದು ಬಿದ್ದು ಶವವಾಗಿ ಪತ್ತೆಯಾಗಿದ್ದಾರೆ.
ಪ್ರಾಥಮಿಕ ತನಿಖೆಯ ಮಾಹಿತಿಗಳ ಪ್ರಕಾರ, ಬಾತ್‌ರೂಮ್‌ನಲ್ಲಿದ್ದ ಗ್ಯಾಸ್ ಗೀಸರ್‌ನಿಂದ ಅಪಾಯಕಾರಿ ಕಾರ್ಬನ್ ಮೊನಾಕ್ಸೈಡ್ ಅನಿಲ ಸೋರಿಕೆಯಾಗಿ, ಆಮ್ಲಜನಕದ ಕೊರತೆಯಿಂದಾಗಿ ಉಸಿರುಗಟ್ಟಿ ಯುವತಿ ಸಾವನ್ನಪ್ಪಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳಲ್ಲಿ ಗ್ಯಾಸ್ ಗೀಸರ್ ದುರಂತಗಳು ಹೆಚ್ಚಾಗುತ್ತಿರುವುದು ಈ ಶಂಕೆಗೆ ಕಾರಣವಾಗಿದೆ.
ಘಟನೆ ಮೇಲ್ನೋಟಕ್ಕೆ ಅಪಘಾತದಂತೆ ಕಂಡರೂ, ವಿನುತಾ ಅವರ ಮೃತದೇಹವು ಬಾತ್‌ರೂಮ್‌ನ ಬಕೆಟ್‌ನಲ್ಲಿ ತಲೆ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸದ್ಯ ಸುತ್ತಮುತ್ತಲಿನವರಲ್ಲಿ ಹಾಗೂ ಪೊಲೀಸರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಕೇವಲ ಅನಿಲ ಸೋರಿಕೆಯಿಂದಾದ ದುರಂತವೇ ಅಥವಾ ಇದರ ಹಿಂದೆ ಬೇರೇನಾದರೂ ನಿಗೂಢ ಕಾರಣವಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಯುವತಿಯ ನಿಗೂಢ ಸಾವಿಗೆ ನಿಖರ ಹಾಗೂ ಅಸಲಿ ಕಾರಣ ಏನೆಂಬುದು ಅಧಿಕೃತವಾಗಿ ಬೆಳಕಿಗೆ ಬರಬೇಕಿದೆ.