Share News

ಕನಕಪುರ: ಎತ್ತಿನ ಗಾಡಿ ಓಡಾಡಲು ಜಾಗ ಬಿಡುವ ವಿಚಾರದಲ್ಲಿ ಉಂಟಾದ ಕಲಹದ ಹಿನ್ನೆಲೆಯಲ್ಲಿ, ತನ್ನದೇ ಸಂಬಂಧಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮೆಂದ್ಯಾಪನಹಳ್ಳಿ ಗ್ರಾಮದ ನಿವಾಸಿಗಳಾದ ಮೃತ ಕೆಂಪೇಗೌಡ ಮತ್ತು ಆರೋಪಿಯ ತಂದೆ ಕುಳ್ಳೇಗೌಡ ಇಬ್ಬರೂ ಸಹೋದರರು. ಆರೋಪಿ ಪ್ರಸನ್ನ @ ಪ್ರಸನ್ನಕುಮಾರ್, ಕುಳ್ಳೇಗೌಡ ಅವರ ಮಗನಾಗಿದ್ದಾನೆ.

​ಆರೋಪಿ ಪ್ರಸನ್ನನು ತನ್ನ ಪಾಲಿನ ಹಿತ್ತಲಿನಲ್ಲಿರುವ ತಿಪ್ಪೆಗುಂಡಿಯಿಂದ ಗೊಬ್ಬರವನ್ನು ಎತ್ತಿನ ಗಾಡಿಯ ಮೂಲಕ ಸಾಗಿಸಲು ಕೆಂಪೇಗೌಡರ ಮನೆಯ ಮುಂದಿನ ಜಾಗವನ್ನು ಬಳಸಬೇಕಿತ್ತು. ಈ ದಾರಿಯ ವಿಚಾರವಾಗಿ ಕಳೆದ 2-3 ವರ್ಷಗಳಿಂದ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು.

ದಿನಾಂಕ 28.12.2020 ರಂದು ರಾತ್ರಿ ಸುಮಾರು 08:00 ಗಂಟೆಗೆ ಕೆಂಪೇಗೌಡರು ಸೋಮೆಂದ್ಯಾಪನಹಳ್ಳಿ ಗ್ರಾಮದ ಪ್ರಸನ್ನನ ಮನೆಯ ಮುಂದೆ ಹೋಗುತ್ತಿದ್ದಾಗ, “ಗಾಡಿ ಹೊಡೆಯಲು ಜಾಗ ಬಿಟ್ಟುಕೊಡಲಿಲ್ಲ” ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಸನ್ನ ಜಗಳ ತೆಗೆದಿದ್ದಾನೆ. ಈ ವೇಳೆ ಕೆಂಪೇಗೌಡನನ್ನು ಕೊಲೆ ಮಾಡುವ ಉದ್ದೇಶದಿಂದ ಬಿದಿರಿನ ದೊಣ್ಣೆಯಿಂದ ತಲೆಯ ಮೇಲೆ 3-4 ಬಾರಿ ಬಲವಾಗಿ ಹೊಡೆದಿದ್ದರಿಂದ ಕೆಂಪೇಗೌಡರು ಸಾವನ್ನಪ್ಪಿದ್ದರು.

​ಈ ಕುರಿತು ತನಿಖೆ ನಡೆಸಿದ್ದ ಪೊಲೀಸರು ಐಪಿಸಿ ಕಲಂ 302ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕನಕಪುರ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕುಮಾರ್ ಎಚ್.ಎನ್ ರವರು, ಸಾಕ್ಷ್ಯಾಧಾರಗಳ ಮೇರೆಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಶಿಕ್ಷೆ ಪ್ರಕಟಿಸಿದ್ದಾರೆ:

​ಶಿಕ್ಷೆ: ಆರೋಪಿ ಪ್ರಸನ್ನ ಕುಮಾರ್‌ಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ.

​ದಂಡ: 1,00,000/- ರೂ.ಗಳ ದಂಡ ವಿಧಿಸಲಾಗಿದೆ.

​ಪರಿಹಾರ: ದಂಡದ ಮೊತ್ತದಲ್ಲಿ 75,000/- ರೂ.ಗಳನ್ನು ಮೃತ ಕೆಂಪೇಗೌಡರ ಪತ್ನಿ ಹಾಗೂ ಫಿರ್ಯಾದುದಾರರಾದ ಶಿವಮ್ಮ ಅವರಿಗೆ ನೀಡಲು ಆದೇಶಿಸಲಾಗಿದೆ.

​ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ.ಕೆ. ರೂಪಲಕ್ಷ್ಮಿ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.


Share News