Share News

ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಾಚ್ ಕಳವು ಪ್ರಕರಣ ಮತ್ತು ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಮೊಕದ್ದಮೆಗಳು ದಾಖಲಾಗಿದ್ದವು. ಈ ಪ್ರಕರಣಗಳ ಬೆನ್ನಟ್ಟಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಸಿಕ್ಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದರು. ಈ ವೇಳೆ ಮನೆ ಕಳವು ಪ್ರಕರಣದ ನಾಲ್ವರು ಆರೋಪಿಗಳನ್ನು ಹೈದರಾಬಾದ್‌ನಲ್ಲಿ ಹಾಗೂ ಜ್ಯೂವೆಲ್ಲರಿ ಶಾಪ್ ಕಳವು ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನ ಶಿವಾಜಿನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಐವರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಕಳವು ಮಾಡಿದ್ದ ಚಿನ್ನಾಭರಣಗಳಲ್ಲಿ ಕೆಲವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು, ಇನ್ನುಳಿದವನ್ನು ಜ್ಯೂವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದರು. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಅವರ ವಾಸದ ಮನೆ ಹಾಗೂ ಜ್ಯೂವೆಲ್ಲರಿ ಅಂಗಡಿಗಳ ಮೇಲೆ ದಾಳಿ ನಡೆಸಿ, ಒಟ್ಟು 1.16 ಕೋಟಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 584 ಗ್ರಾಂ ಚಿನ್ನಾಭರಣ, 1 ಕಾರು, 1 ವಾಚ್ ಮತ್ತು 9.85 ಲಕ್ಷ ನಗದು ಸೇರಿದೆ. ಈ ಬಂಧನದಿಂದ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಒಟ್ಟು 3 ಪ್ರಕರಣಗಳು ಪತ್ತೆಯಾದಂತಾಗಿದ್ದು, ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಭರ್ಜರಿ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಸೈದುಲು ಅಡಾವತ್ ರವರ ಸಮರ್ಥ ಮಾರ್ಗದರ್ಶನದಲ್ಲಿ ನಡೆಸಲಾಯಿತು. ವೈಟ್‌ ಫೀಲ್ಡ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ. ರೀನಾ ಸುವರ್ಣ ರವರ ನೇತೃತ್ವದಲ್ಲಿ, ವೈಟ್‌ ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆದ ಶ್ರೀ. ಪೀತಮ್ ಎ ಡಿ ಹಾಗೂ ಇತರೆ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವು ಅತ್ಯಂತ ಚಾಣಾಕ್ಷತನದಿಂದ ಈ ಪ್ರಕರಣಗಳನ್ನು ಬೇಧಿಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

 


Share News