Share News

ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯ ಮಾಲೀಕರು ಎಂದಿನಂತೆ ವ್ಯಾಪಾರ ಮುಗಿಸಿ, ಚಿನ್ನಾಭರಣಗಳನ್ನು ಲಾಕರ್‌ನಲ್ಲಿಟ್ಟು ಮತ್ತು ಬೆಳ್ಳಿಯ ವಸ್ತುಗಳನ್ನು ಶೋಕೇಸ್‌ನಲ್ಲಿಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಆದರೆ ಮರುದಿನ ಬೆಳಗ್ಗೆ ಅಪರಿಚಿತ ಕಳ್ಳರು ಜ್ಯೂವೆಲರಿ ಅಂಗಡಿಯ ಹಿಂಭಾಗದ ಗೋಡೆಯನ್ನು ಹೊಡೆದು ಒಳನುಗ್ಗಿದ್ದರು. ಅಂಗಡಿಯಲ್ಲಿದ್ದ ಸುಮಾರು 70 ಕೆಜಿ ಬೆಳ್ಳಿಯ ವಸ್ತುಗಳನ್ನು ಹಾಗೂ ಅದರ ಹಿಂಭಾಗದಲ್ಲಿದ್ದ ಸೆರಾಮಿಕ್ಸ್ ಅಂಗಡಿಯ ಶಟರ್ಸ್ ಬೀಗ ಒಡೆದು ಲ್ಯಾಪ್ಟಾಪ್, ಮೊಬೈಲ್ ಫೋನ್, ಡಿವಿಆರ್, ಸ್ಯಾನಿಟರಿ ವಸ್ತುಗಳು ಮತ್ತು ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಭಾತ್ಮೀದಾರರಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ರಾಜಸ್ಥಾನದ ರಾಯಪುರದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ನಂತರ ನ್ಯಾಯಾಲಯದಿಂದ 12 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಕಳವು ಮಾಡಿದ ಬೆಳ್ಳಿಯನ್ನು ತೆಲಂಗಾಣದ ಕುಲ್ಕಾಚರಲಾ ಮತ್ತು ಸಿಕಂದರಾಬಾದ್‌ನ ಜ್ಯೂವೆಲ್ಲರಿ ಅಂಗಡಿಗಳಲ್ಲಿ ಅಡಮಾನ ಇಟ್ಟಿರುವುದಾಗಿ ಬಾಯಿಬಿಟ್ಟರು. ಅವರ ನೀಡಿದ ಮಾಹಿತಿಯ ಆಧಾರದ ಮೇಲೆ ಪ್ರಕರಣದಲ್ಲಿದ್ದ ಮತ್ತೊಬ್ಬ ಸಹಚರನನ್ನು ನೆಲಮಂಗಲದ ದಾಸನಪುರದಲ್ಲಿ ಬಂಧಿಸಲಾಯಿತು. ಈ ಮೂವರು ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಒಟ್ಟು 35 ಕೆ.ಜಿ 874 ಗ್ರಾಂ ಬೆಳ್ಳಿಯ ಗಟ್ಟಿ ಮತ್ತು ಇನ್ನಿತರ ವಸ್ತುಗಳನ್ನು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 98.39 ಲಕ್ಷ ಆಗಿದೆ. ಸದ್ಯ ಮೂವರೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಅತ್ಯಂತ ಕಠಿಣ ಹಾಗೂ ಸವಾಲಿನ ಕಳವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಅಧಿಕಾರಿಗಳ ತಂಡ ದೊಡ್ಡ ಯಶಸ್ಸು ಕಂಡಿದೆ. ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ನಾಗೇಶ್ ಡಿ ಎಲ್ ರವರ ಸಮರ್ಥ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಚಿಕ್ಕಬಾಣಾವರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ರವಿಕುಮಾರ್ ಕೆವೈ ರವರು ಈ ತನಿಖಾ ತಂಡದ ನೇತೃತ್ವವನ್ನು ವಹಿಸಿದ್ದರು. ಇನ್ನು ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆದ ಶ್ರೀ. ಗಂಗರುದ್ರಯ್ಯ ಪಿ ಮತ್ತು ಅವರ ಸಿಬ್ಬಂದಿ ವರ್ಗದವರು ಖುದ್ದಾಗಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಆರೋಪಿಗಳನ್ನು ಹಾಗೂ ಕಳವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾಲನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

 


Share News